Monday, 3 June 2013

Diploma Courses in Arts after SSLC - Article in Vijaykarnataka 03 June 2013



Diploma Courses in Arts after SSLC - Article in Vijaykarnataka 03 June 2013
http://vijaykarnatakaepaper.com/Details.aspx?id=4626&boxid=14856937

ಹೋಟೆಲ್, ಚಿತ್ರಕಲೆಯಲ್ಲಿ ಡಿಪ್ಲೊಮಾ ಕೋರ್ಸ್‌ಗಳು
Jun 3, 2013, 03.54AM IST
- ಲೇಖನ: ಬೇದ್ರೆ ಮಂಜುನಾಥ

ಹೋಟೆಲ್ ಉದ್ಯಮದಲ್ಲಿ ಉಚಿತ ತರಬೇತಿ
ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರವಾಸೋದ್ಯಮ ವಿಭಾಗದಲ್ಲಿ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗಾಗಿ ಔಪಚಾರಿಕಾ (ಹೋಟೆಲ್ ಉದ್ಯಮ) ಕ್ಷೇತ್ರದಲ್ಲಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.

ಹೌಸ್‌ಕೀಪಿಂಗ್, ಫುಡ್ ಅಂಡ್ ಬೆವರೇಜ್, ಫುಡ್ ಪ್ರೊಡಕ್ಷನ್ ಕೋರ್ಸ್‌ಗಳಲ್ಲಿ ತರಬೇತಿ ಪಡೆಯಲು ಬಯಸುವವರು 18 ರಿಂದ 25 ವರ್ಷ ವಯೋಮಿತಿಯಲ್ಲಿದ್ದು , ಕನಿಷ್ಟ 8ನೇ ತರಗತಿ ಪಾಸಾಗಿರಬೇಕು. 45 ದಿನಗಳ ತರಬೇತಿ ಅವಧಿಯಲ್ಲಿ ರೂ.2000/- ಸ್ಟೈಫಂಡ್ ಮತ್ತು ರೂ.1,500/- ಪ್ರಯಾಣಭತ್ಯೆ ಹಾಗೂ ಸೂಕ್ತ ದಿನಭತ್ಯೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಕರ್ನಾಟಕ ಕಲಾ ಮಹಾವಿದ್ಯಾಲಯದ ಸ್ನಾತಕೋತ್ತರ ಪ್ರವಾಸೋದ್ಯಮ ವಿಭಾಗವನ್ನು ಸಂಪರ್ಕಿಸಲು ತಿಳಿಸಲಾಗಿದೆ. ಫೋನ್:0836-2441655 / 2215344

ಲಲಿತಕಲೆಗಳ ಕೋರ್ಸ್‌ಗಳು

'ಒಂದು ಚಿತ್ರ ಸಾವಿರ ಪದಗಳಿಗೆ ಸಮ' ಎನ್ನುತ್ತದೆ ಚೀನೀ ಗಾದೆ. ಭಾಷೆಯ ಕಲಿಕೆಯಲ್ಲಿ ಸಾವಿರಾರು ಪದಗಳಲ್ಲಿ ವಿವರಿಸಲಾಗದ್ದನ್ನು ಕೇವಲ ಒಂದು ಚಿತ್ರ ಒಂದೇ ಕ್ಷಣದಲ್ಲಿ ಅರ್ಥಮಾಡಿಸುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮತ್ತು ಕಲಿಕೆಯ ಸಂದರ್ಭದಲ್ಲಿ ನೆರವಿಗೆ ಬರುವ ಈ ಬಣ್ಣಗಳ ಒಡನಾಟದ ಚಿತ್ರಕಲೆ ಚಿಕ್ಕಂದಿನಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ. ಬೆಂಗಳೂರಿನ ಚಿತ್ರಕಲಾ ಪರಿಷತ್, ಕೆನ್ ಸ್ಕೂಲ್ ಆಫ್ ಆರ್ಟ್ಸ್, ಮೈಸೂರಿನ ಕಾವಾ, ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ಸ್ ಕಾಲೇಜು, ಬದಾಮಿಯಲ್ಲಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ಅಧ್ಯಯನ ಕೇಂದ್ರ, ಶಾಂತಿನಿಕೇತನದ ವಿಶ್ವಭಾರತಿ, ಅಹಮದಾಬಾದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮೊದಲಾದ ಸಂಸ್ಥೆಗಳಲ್ಲಿ ಚಿತ್ರಕಲಾ ಅಧ್ಯಯನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಕರ್ನಾಟಕದಲ್ಲಿನ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಂಯೋಜಿತ ಕಾಲೇಜುಗಳ ಮೂಲಕ ಕಲಾ ಶಿಕ್ಷಣ ದೊರೆಯುತ್ತಿದ್ದರೂ ಖಾಸಗಿಯಾಗಿಯೂ ಹಲವು ಚಿತ್ರಕಲಾ ಶಾಲೆಗಳು ತರಬೇತಿ ನೀಡುತ್ತಲೇ ಇವೆ. ಹಲವು ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಇತ್ತೀಚೆಗೆ ವಾರಾಂತ್ಯದ ತರಬೇತಿ ತರಗತಿಗಳೂ, ಕ್ರಾಷ್ ಕೋರ್ಸ್‌ಗಳು ಏರ್ಪಾಡಾಗುತ್ತಿವೆ.

ದಶ್ಯ ಮಾಧ್ಯಮಗಳಲ್ಲಿ ದೊರೆಯುತ್ತಿರುವ ವಿಫುಲ ಅವಕಾಶಗಳಿಂದಾಗಿ ಚಿತ್ರಕಲೆ, ಗ್ರಾಫಿಕ್ಸ್, ಫೋಟೋ ಜರ್ನಲಿಸಂ, ವೆಬ್ ಡಿಸೈನಿಂಗ್, ಅನಿಮೇಶನ್ ಮೊದಲಾದ ಕಲೆಯ ಮಾಧ್ಯಮಗಳಿಗೆ ಬೇಡಿಕೆ ಹೆಚ್ಚಾಗಿದೆ. ಐದು ವರ್ಷಗಳ ಚಿತ್ರಕಲಾ ಡಿಪ್ಲೊಮಾ ಅಥವಾ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದವರಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಅನಿಮೇಶನ್ ತಂತ್ರಾಂಶಗಳ ಪರಿಚಯ ಇದ್ದರೆ ಜಗತ್ತಿನಲ್ಲಿ ಎಲ್ಲೆಡೆ ಅವರಿಗೆ ಬೇಡಿಕೆ ಇದ್ದದ್ದೇ!

ಚಿತ್ರಕಲಾ ಪರಿಷತ್ತಿನ ಲಲಿತಕಲಾ ಮಹಾವಿದ್ಯಾಲಯ, ಬೆಂಗಳೂರು

ಚಿತ್ರಕಲಾ ಪರಿಷತ್ತಿನ ಆಶ್ರಯದಲ್ಲಿ, 1964ರಲ್ಲಿ ಆರಂಭಗೊಂಡಿದ್ದ ಚಿತ್ರಕಲಾ ವಿದ್ಯಾಲಯ 1983ರಲ್ಲಿ ಲಲಿತಕಲಾ ಮಹಾವಿದ್ಯಾಲಯವಾಗಿ (ಕಾಲೇಜ್ ಆಫ್ ಫೈನ್ ಆರ್ಟ್ಸ್) ಉನ್ನತೀಕರಿಸಲ್ಪಟ್ಟು 1990 ರಿಂದ, ಸ್ನಾತಕೋತ್ತರ ಶಿಕ್ಷಣ, ಸ್ನಾತಕೋತ್ತರ ಡಿಪ್ಲೊಮಾ ತರಗತಿಗಳನ್ನು ನಡೆಸುತ್ತಿದ್ದು 2008 ರಿಂದ ಸಂಶೋಧನಾ ವ್ಯಾಸಂಗಕ್ಕೂ ಅವಕಾಶಮಾಡಿಕೊಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಮಾನ್ಯತೆ ಪಡೆದಿರುವ ಈ ಕಾಲೇಜಿಗೆ ನ್ಯಾಕ್ ಸಮಿತಿ ಃ++ ಗ್ರೇಡ್ ನೀಡಿದೆ.

ಇಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜುಅಲ್ ಆರ್ಟ್ಸ್, ಸ್ನಾತಕೋತ್ತರ ಡಿಪ್ಲೊಮ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಅತ್ಯಂತ ಬೇಡಿಕೆಯುಳ್ಳ ಈ ತರಬೇತಿಗೆ ರಾಜ್ಯದ ಎಲ್ಲೆಡೆಯಿಂದ ಕಲಾ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ನೋಡಿ: www.chitrakalaparishath.org


ಚಾಮರಾಜೇಂದ್ರ ದಶ್ಯಕಲಾ ಮಹಾವಿದ್ಯಾಲಯ (ಚಾಮರಾಜೇಂದ್ರ ಆಕಾಡೆಮಿ ಆಫ್ ವಿಜುಅಲ್ ಆರ್ಟ್ಸ್-ಕಾವಾ), ಮೈಸೂರು.
1906ರಲ್ಲಿ ಮೈಸೂರಿನ ನಾಲ್ವಡಿ ಕಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್, 'ಮುಂಬಯಿಯನ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಮಾದರಿಯಲ್ಲಿ ಈ ಸಂಸ್ಥೆ ಇರಬೇಕು' ಎಂಬ ಖ್ಯಾತ ರಷ್ಯನ್ ಕಲಾವಿದ ಸ್ವೆಟಸ್ಲಾವ್ ರೋರಿಕ್ ಅವರ ಸಲಹೆಯಂತೆ ಪರಿಷ್ಕರಿಸಲ್ಪಟ್ಟು, 1981 ರಲ್ಲಿ ಚಾಮರಾಜೇಂದ್ರ ದಶ್ಯಕಲಾ ಮಹಾವಿದ್ಯಾಲಯವಾಗಿ ಮರುನಾಮಕರಣಗೊಂಡಿತು.

2004ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ, ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ಕಾವಾದಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ, ಫೋಟೋಗ್ರಫಿ, ಫೋಟೋ-ಜರ್ನಲಿಸಂ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜುಅಲ್ ಆರ್ಟ್ಸ್, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳನ್ನು ನಡೆಸಲಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ನೋಡಿ: www.cavamysore.com


ಕುಸುರಿ ಕಲೆ, ಕೈಬರಹ, ಕ್ಯಾಲಿಗ್ರಫಿ ಕೋರ್ಸ್‌ಗಳು

ನಮ್ಮ ಕೈಬರಹ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆಯಂತೆ! ಕೈಬರಹ ಸುಧಾರಿಸುವ ವಿಶೇಷ ಕೋರ್ಸ್‌ಗಳು ಈಗ ಎಲ್ಲೆಡೆ ಭರಾಟೆಯಿಂದ ನಡೆಯುತ್ತಿವೆ. ಗ್ರಾಫಾಲಜಿ ಎಂದು ಗುರುತಿಸಲಾದ ಈ ಕೋರ್ಸ್‌ನಲ್ಲಿ ಕೈಬರಹ ಅಧ್ಯಯನ ಹೇಳಿಕೊಡಲಾಗುತ್ತಿದೆ. ಗ್ರಾಫಾಲಜಿ ವಿಷಯದ ಪುಸ್ತಕಗಳೂ ಪ್ರಕಟವಾಗಿವೆ.

ಕ್ಯಾಲಿಗ್ರಫಿ ಕೋರ್ಸ್‌ಗಳು, ಕುಸುರಿ ಕಲೆ, ನಿಬ್ ಪೇಂಟಿಂಗ್, ದಾರದ ಕಲೆ, ಕ್ರೋಷಾ ಕಲೆ, ಸ್ಕೆಚ್, ಸ್ವೆಟರ್-ಕುಲಾವಿ ಹೆಣಿಗೆ, ಮದುವೆ, ದೇವರ ಪೂಜೆ ಮೊದಲಾದ ಸಂದರ್ಭಗಳಲ್ಲಿ ಬಳಸುವ ಕಲಾತ್ಮಕ ಕುಸುರಿ ಕಲೆ, ರಂಗೋಲಿ, ಬಣ್ಣದ ಚಿತ್ತಾರಗಳ ರಚನೆ, ಅರಿಸಿನ-ಕುಂಕುಮದ ಮಂಡಲ ರಚನೆಗೂ ತರಬೇತಿ ಶಿಬಿರಗಳಿವೆ.

ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ
ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಕೋರ್ಸ್, ಬ್ಯಾಚುಲರ್ ಆಫ್ ಪರ್‌ಫಾರ‌್ಮಿಂಗ್ ಆರ್ಟ್ಸ್ (ಬಿ.ಪಿ.ಎ.), ಮಾಸ್ಟರ್ ಆಫ್ ಪರ್‌ಫಾರ‌್ಮಿಂಗ್ ಆರ್ಟ್ಸ್ (ಎಂ.ಪಿ.ಎ.), ಎಂ. ಫಿಲ್., ಡಿ.ಲಿಟ್. ಮತ್ತು ಪಿ.ಎಚ್.ಡಿ. ಅಧ್ಯಯನಕ್ಕಾಗಿ ಪ್ರತಿವರ್ಷ ಅರ್ಜಿಗಳನ್ನು ಕರೆಯಲಾಗುತ್ತದೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಗಾಯನ, ವಿವಿಧ ಸಂಗೀತವಾದ್ಯಗಳ ವಾದನ, ಭರತನಾಟ್ಯ, ನಾಟಕ ಇತ್ಯಾದಿ ವಿಷಯಗಳಲ್ಲಿ ಆಸಕ್ತಿಯಿರುವ, ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ, ಆಸಕ್ತ ಅಭ್ಯರ್ಥಿಗಳು ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾಲಯದಿಂದ ಅರ್ಜಿಗಳನ್ನು ಪಡೆದು, ಭರ್ತಿಮಾಡಿ ಸಲ್ಲಿಸಬಹುದು. ಲಿಖಿತ ಮತ್ತು ಸಂದರ್ಶನಗಳ ಆಯ್ಕೆ ಪರೀಕ್ಷೆ ಇದ್ದು ಶಾಸ್ತ್ರ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕು. ವಿವರಗಳಿಗೆ ಸಂಪರ್ಕಿಸಿರಿ: ರಿಜಿಸ್ಟ್ರಾರ್, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾಲಯ, ಜೆ.ಎಲ್.ಬಿ. ರಸ್ತೆ, ಬಲ್ಲಾಳ್ ವತ್ತದ ಹತ್ತಿರ, ಲಕ್ಷ್ಮೀಪುರಂ, ಮೈಸೂರು - 570004.

ರಂಗಶಿಕ್ಷಣ - ಪ್ರದರ್ಶನ ಕಲೆಯಲ್ಲಿ ತರಬೇತಿ
ಇತ್ತೀಚೆಗೆ ಟಿ.ವಿ. ಸೀರಿಯಲ್‌ಗಳಲ್ಲಿ ನಟಿಸುವ, ಆ್ಯಂಕರ್‌ಗಳಾಗಿ ದುಡಿಯುವ ಅವಕಾಶ, ರೇಡಿಯೋಗಳಲ್ಲಿ ಜಾಕಿಯಾಗಿ ಸೇವೆ ಸಲ್ಲಿಸುವ, ಸ್ಟೇಜ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ಗಳನ್ನು ನಡೆಸಿಕೊಡುವ ಅವಕಾಶ ಬಳಸಿಕೊಳ್ಳುವತ್ತ ಹೆಚ್ಚು ಹೆಚ್ಚು ಯುವಜನರು ಒಲವು ತೋರಿಸುತ್ತಿದ್ದಾರೆ. ಧ್ವನಿ ಬಳಕೆಯ ವೈವಿಧ್ಯತೆ, ಅಂಗಚಲನೆ, ನಟನಾ ಕೌಶಲ ಇತ್ಯಾದಿ ವಿಷಯಗಳಲ್ಲಿ ಪರಿಣತಿ ಇದ್ದವರಿಗೆ ವಿಪರೀತ ಬೇಡಿಕೆ ಇದೆ. ಸಿನಿಮಾ ತಂತ್ರಜ್ಞಾನ, ಫೋಟೋಗ್ರಫಿ, ಸಿನಿಮಾಟೋಗ್ರಫಿ ಕೋರ್ಸ್‌ಗಳತ್ತಲೂ ಹಲವರು ವಾಲುತ್ತಿದ್ದಾರೆ. ರಂಗಶಿಕ್ಷಣದ ಮೂಲಪಾಠಗಳ ಪರಿಚಯ ಇದ್ದವರು ಈ ಪ್ರದರ್ಶನ ಕಲೆಗಳ ರಂಗದಲ್ಲಿ ಖಂಡಿತಾ ಮಿಂಚಬಲ್ಲರು. ಒಂದು ವರ್ಷದ ರಂಗಶಿಕ್ಷಣ ತರಬೇತಿ ಇತ್ತೀಚೆಗೆ ತುಂಬಾ ಜನಪ್ರಿಯವಾಗುತ್ತಿದೆ.

ನಟನೆಯಲ್ಲಿ ತರಬೇತಿ
ದೆಹಲಿಯಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ ರಂಗಭೂಮಿಗಾಗಿ ಶ್ರಮಿಸುತ್ತಿರುವ ಅಗ್ರಗಣ್ಯ ಸಂಸ್ಥೆ. ಪ್ರತಿವರ್ಷ ವಿವಿಧ ಡಿಪ್ಲೋಮಾ, ಪದವಿ ಹಾಗೂ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುತ್ತಿರುವ ಎನ್.ಎಸ್.ಡಿ. ದೇಶದ ವಿವಿಧ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದಿದ್ದು ಕಾಲಕಾಲಕ್ಕೆ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಅಗತ್ಯಕ್ಕೆ ತಕ್ಕಂತೆ ಶಿಬಿರಗಳನ್ನು, ಕೋರ್ಸ್‌ಗಳನ್ನು, ಶಿಕ್ಷಣದಲ್ಲಿ ರಂಗಭೂಮಿ, ಸಮಗ್ರ ರಂಗಭೂಮಿ ವಸತಿ ಕಮ್ಮಟವನ್ನು ಏರ್ಪಡಿಸುತ್ತದೆ. ಪ್ರಾಥಮಿಕ ರಂಗಭೂಮಿ ತರಬೇತಿ ಮತ್ತು ಮಕ್ಕಳ ನಾಟಕ ರಂಗದ ಕಾರ್ಯಾಚರಣೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ: ಡೈರೆಕ್ಟರ್, ಎನ್.ಎಸ್.ಡಿ. ಬೆಂಗಳೂರು ವಿಭಾಗ, ಗುರುನಾನಕ್ ಭವನ್, ನಂ.6, ಮಿಲ್ಲರ್ಸ್‌ ಟ್ಯಾಂಕ್ ಬಂಡ್ ರಸ್ತೆ, ವಸಂತನಗರ, ಬೆಂಗಳೂರು-560052
http://nsd.gov.in/


ಮೈಸೂರಿನ ರಂಗಾಯಣದಲ್ಲಿ ರಂಗಶಿಕ್ಷಣ ಡಿಪ್ಲೊಮಾ
ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ರಂಗಾಯಣ 1989ರಲ್ಲಿ ಆರಂಭಗೊಂಡಿದ್ದು 2010 ರಿಂದ ಸರ್ಕಾರವು ರಂಗಶಾಲೆಯನ್ನು ಆರಂಭಿಸಿದೆ. ಈ ರಂಗಶಾಲೆ - ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲಮೋ ಕೋರ್ಸ್ ನಡೆಸುತ್ತಿದ್ದು 2012-13ನೇ ಸಾಲಿನ ರಂಗಶಿಕ್ಷಣ ಡಿಪ್ಲೊಮೊಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕೋರ್ಸ್‌ಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಮಾನ್ಯತೆ ನೀಡಿದೆ. ಆಸಕ್ತರು 30-05-2012ರ ಒಳಗಾಗಿ ರೂ. 50/- ಮನಿಆರ್ಡರ್ ಕಳಿಸಿಕೊಟ್ಟು ಪ್ರಾಸ್ಪೆಕ್ಟಸ್ ಮತ್ತು ಅರ್ಜಿ ತರಿಸಿಕೊಳ್ಳಬಹುದು.

ಒಂದು ವರ್ಷದ ರಂಗಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಯು ಹೆಚ್ಚಿನ ವತ್ತಿಪರ ನಟನ ಪರಿಣತಿ ತರಬೇತಿಗಾಗಿ ರಂಗಾಯಣ ರೆಪರ್ಟರಿಯಲ್ಲಿ ಕಿರಿಯ ಕಲಾವಿದನಾಗಿ ಒಪ್ಪಂದದ ಮೇಲೆ ಎರಡು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಬಹುದು. ಈ ಎರಡು ವರ್ಷಗಳ ಅವಧಿಯಲ್ಲಿ ನಿಗದಿತ ಸಂಭಾವನೆಯನ್ನು ನೀಡಲಾಗುವುದು ಮತ್ತು ಈ ಸೇವಾವಧಿ ಪೂರ್ಣಗೊಳಿಸಿದ ವಿದ್ಯಾರ್ಥಿಯು *ವತ್ತಿಪರ ಪರಿಣತಿ* ಪ್ರಮಾಣಪತ್ರವನ್ನು ಪಡೆಯಲು ಅರ್ಹನಾಗಿರುತ್ತಾನೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಂಗಾಯಣ, ರಂಗಶಾಲೆ
ಕಲಾಮಂದಿರ ಆವರಣ
ವಿನೋಬಾ ರಸ್ತೆ
ಮೈಸೂರು - 560 005
ಫೋನ್: 0821-2512629 / 2512639
http://rangayana.org
http://rangayanamysore.blogspot.in/
www.facebook.com/Rangayana
http://en.wikipedia.org/wiki/Rangayana

ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣ ಡಿಪ್ಲೊಮಾ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡಿನಲ್ಲಿರುವ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ 1980ರಿಂದ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲಮೋ ಕೋರ್ಸ್ ಆರಂಭಗೊಂಡಿದ್ದು ಪ್ರತಿವರ್ಷ 15 ರಂಗಾಸಕ್ತರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಊಟ-ವಸತಿ-ಶಿಕ್ಷಣ ಉಚಿತವಾಗಿ ಲಭ್ಯವಿದ್ದು ತರಬೇತಿಯ ಅವಧಿಯಲ್ಲಿ ಶಿಷ್ಯವೇತನವನ್ನು ಕೂಡ ನೀಡಲಾಗುತ್ತದೆ. ಕೆ.ವಿ. ಸುಬ್ಬಣ್ಣ ಅವರ ನಾಯಕತ್ವದಲ್ಲಿ ವಿಶ್ವವಿಖ್ಯಾತಿಗಳಿಸಿದ್ದ ನೀನಾಸಂ ತಿರುಗಾಟ 1985ರಲ್ಲಿ ಆರಂಭಗೊಂಡಿದ್ದು ಇದುವರೆಗೆ 3000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಡೆಸಿಕೊಟ್ಟು ಎರಡು ಮಿಲಿಯನ್‌ಗೂ ಹೆಚ್ಚು ಜನರನ್ನು ತಲುಪಿರುವುದು ದೇಶದ ರಂಗ ಇತಿಹಾಸದಲ್ಲಿ ದಾಖಲಾಗಿದೆ.

ನೀನಾಸಂನಲ್ಲಿ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಯೋಗ, ಕಂಸಾಳೆ, ಯಕ್ಷಗಾನ, ಗಮಕ, ಮುಖವರ್ಣಿಕೆ, ಕೋಲಾಟ, ವೀರಗಾಸೆ, ಪ್ರಸಾದನ, ನೆರಳು-ಬೆಳಕು ಕಾರ್ಯಾಗಾರಗಳಲ್ಲದೇ ಕನ್ನಡ ಸಾಹಿತ್ಯ ಪರಂಪರೆಯ ಪರಿಚಯವನ್ನು ನಾಡಿನ ಪ್ರಖ್ಯಾತ ತಜ್ಞರಿಂದ ಮಾಡಿಸಲಾಗುವುದು. ತರಬೇತಿಯ ಅವಧಿಯಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸುವ ಅವಕಾಶ ಮತ್ತು ನೀನಾಸಂ ರಂಗತಿರುಗಾಟದಲ್ಲಿ ಭಾಗವಹಿಸುವ ಅವಕಾಶ ಈ ಅಭ್ಯರ್ಥಿಗಳಿಗೆ ದೊರೆಯುತ್ತಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ನೀನಾಸಂ ರಂಗಶಿಕ್ಷಣ ಕೇಂದ್ರ
ಹೆಗ್ಗೋಡು - 577 407
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
www.ninasam.org/
www.ninasam.org/ninasam-theater-institute/how-to-apply/

ಸಾಣೇಹಳ್ಳಿಯ ಶ್ರೀಮಠದಲ್ಲಿ ರಂಗಶಿಕ್ಷಣ ಡಿಪ್ಲೊಮಾ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗ ಶಿಕ್ಷಣ ಕೇಂದ್ರದಲ್ಲಿ 2008ನೇ ಸಾಲಿನಿಂದ ಒಂದು ವರ್ಷದ ರಂಗ ಶಿಕ್ಷಣ ಡಿಪ್ಲಮೋ ಕೋರ್ಸ್ ಆರಂಭಗೊಂಡಿದ್ದು ಪ್ರತಿವರ್ಷ 20 ರಂಗಾಸಕ್ತರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಊಟ-ವಸತಿ-ಶಿಕ್ಷಣ ಉಚಿತವಾಗಿ ಲಭ್ಯವಿದ್ದು ತರಬೇತಿಯ ಅವಧಿಯಲ್ಲಿ ಶಿಷ್ಯವೇತನವನ್ನು ಕೂಡ ನೀಡಲಾಗುತ್ತದೆ. ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತತ್ವದಲ್ಲಿ, ಡಾ. ಕೆ ಮರುಳಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ಪಠ್ಯರಚನಾ ಸಮಿತಿ ರಚಿತವಾಗಿ ದೇಶ ವಿದೇಶಗಳ ರಂಗಶಿಕ್ಷಣ ಪಠ್ಯಕ್ರಮವನ್ನು ಅಭ್ಯಸಿಸಿ ಸೂಕ್ತ ಪಠ್ಯಕ್ರಮ ರೂಪಿಸಲಾಗಿದ್ದು ಸ್ಥಳೀಯವಾಗಿ ಯೋಗ, ಕಂಸಾಳೆ, ಯಕ್ಷಗಾನ, ಗಮಕ, ಮುಖವರ್ಣಿಕೆ, ಕೋಲಾಟ, ವೀರಗಾಸೆ, ಪ್ರಸಾದನ, ನೆರಳು-ಬೆಳಕು ಕಾರ್ಯಾಗಾರಗಳಲ್ಲದೇ ಕನ್ನಡ ಸಾಹಿತ್ಯ ಪರಂಪರೆಯ ಪರಿಚಯವನ್ನು ನಾಡಿನ ಪ್ರಖ್ಯಾತ ತಜ್ಞರಿಂಣದ ಮಾಡಿಸಲಾಗುವುದು. ತರಬೇತಿಯ ಅವಧಿಯಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸುವ ಅವಕಾಶ ಮತ್ತು *ಶಿವಸಂಚಾರ* ಎಂಬ ರಂಗತಿರುಗಾಟದಲ್ಲಿ ಭಾಗವಹಿಸುವ ಅವಕಾಶ ಈ ಅಭ್ಯರ್ಥಿಗಳಿಗೆ ದೊರೆಯುತ್ತಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶ್ರೀ ಶಿವಕುಮಾರ ಕಲಾಸಂಘ (ರಿ) ಸಾಣೇಹಳ್ಳಿ
ಶ್ರೀ ಶಿವಕುಮಾರ ರಂಗ ಶಿಕ್ಷಣ ಕೇಂದ್ರ
ಸಾಣೇಹಳ್ಳಿ - 577 515
ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ
ಫೋನ್: 08199-243772 / 9449649850
http://shivasanchara.org/
http://shivasanchara.org/sanihalli/index.htm
http://shivasanchara.blogspot.in/2010/11/shivasanchara-sanehalli-website.html

ಲೇಖನ: ಬೇದ್ರೆ ಮಂಜುನಾಥ

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...