Monday, 21 September 2015

Wheel Cart for Paralysed Animals- Article by Bedre Manjunath - 26 Aug 2015 Vijayavani Daily - Masth Section

ಪಾರ್ಶ್ವವಾಯು ಪೀಡಿತ ಸಾಕುಪ್ರಾಣಿಗಳಿಗೆ ವರದಾನ 
Wheel Cart for Paralysed Animals
ಬೇದ್ರೆ ಮಂಜುನಾಥ - 26 Aug 2015 Vijayavani Daily - Masth Section
 
ಹಿಂದಿನ ಎರಡೂ ಕಾಲುಗಳು ಸ್ವಾಧಿನ ಇಲ್ಲದ ಬೀದಿ ನಾಯಿಯೊಂದನ್ನು ಪಶುವೈದ್ಯಕೀಯ ಕಾಲೇಜಿನ ಗೇಟಿನ ಬಳಿ ಯಾರೋ ಬಿಟ್ಟುಹೋಗಿದ್ದರು. ಗಾಯಗೊಂಡು ತೆವಳುತ್ತಿದ್ದ ಮರಿಯನ್ನು ನಿತಿನ್ ಮತ್ತು ಸ್ನೇಹಿತರು ಕಾಲೇಜಿಗೆ ಒಯ್ದು, ಚಿಕಿತ್ಸೆ ನೀಡಿದರು. ಫಿಜಿಯೋಥೆರಪಿ, ಔಷಧೋಪಚಾರಗಳಿಂದ ಗುಣಕಾಣದೆ ಇದ್ದಾಗ ಅದರ ತೆವಳುವಿಕೆಯನ್ನು ತಪ್ಪಿಸಲು ಆಟದ ಸಾಮಾನುಗಳ ಗಾಲಿಗಳನ್ನು ಬಳಸಿ ಪುಟ್ಟ ಟ್ರಾಲಿಯನ್ನು ರೂಪಿಸಿದರು. ಇದೇ ಹೊಸ ಸಂಶೋಧನೆಗೆ ನಾಂದಿಯಾಯಿತು.
ಪ್ರಾಣಿಗಳಿಗೆ ಅಪಘಾತವಾದ ಸಂದರ್ಭದಲ್ಲಿ ಅಥವಾ ನರದೌರ್ಬಲ್ಯದಿಂದ ಕಾಣಿಸಿಕೊಳ್ಳುವ ಪಾರ್ಶ್ವವಾಯುವಿನಿಂದಾಗಿ ಕಾಲುಗಳನ್ನು ಅಲುಗಾಡಿಸಲೂ ಸಾಧ್ಯವಾಗದು. ಅಂತಹ ಪ್ರಾಣಿಗಳನ್ನು ಸಾಮಾನ್ಯವಾಗಿ ದೂರ ಅಟ್ಟುವುದು, ತಮ್ಮಷ್ಟಕ್ಕೇ ನರಳಿ ಸಾಯಲು ಬಿಡುವುದು ಇಲ್ಲವೇ ವೈದ್ಯರ ಸಹಾಯದಿಂದ ದಯಾಮರಣ ದಯಪಾಲಿಸುವುದು ನಡೆಯುತ್ತಲೇ ಇದೆ.
ಸಾಕುಪ್ರಾಣಿಗಳ ವಿಷಯದಲ್ಲಿ ಅಲ್ಪ ಸ್ವಲ್ಪ ಔಷಧೋಪಚಾರ ನಡೆದರೂ ಬಹಳ ಕಾಲ ಸಹಿಸಿಕೊಳ್ಳುವವರು ವಿರಳ. ಬೀಡಾಡಿ ನಾಯಿ, ದನಕರುಗಳು ಯಾವ ಚಿಕಿತ್ಸೆಯ ಸೌಲಭ್ಯವೂ ದೊರೆಯದೆ ನರಳುತ್ತಲೇ ಕೊನೆಯುಸಿರೆಳೆಯುತ್ತವೆ. ಪ್ರಾಣಿದಯಾ ಸಂಘದವರ ಕಣ್ಣಿಗೆ ಬಿದ್ದ ಪ್ರಾಣಿಗಳ ಸ್ಥಿತಿ ಸ್ವಲ್ಪ ಆಶಾದಾಯಕ ಎನ್ನಬಹುದು. ಇಂತಹ ಪ್ರಾಣಿಗಳಿಗೆ ಸಹಜವಾದ ಜೀವನ ನಡೆಸಲು ಅನುವಾಗುವಂತೆ ನೆರವು ನೀಡುವ ಹಲವು ವೈದ್ಯ-ಉಪಕರಣಗಳು ಆವಿಷ್ಕಾರಗೊಳ್ಳುತ್ತಲೇ ಇವೆ.
ಅವುಗಳ ಲಾಭ ನೂರಾರು ಪ್ರಾಣಿಗಳಿಗೆ ತಲುಪುತ್ತಲೂ ಇವೆ. ಇಂತಹ ಒಂದು ಅಪರೂಪದ ಗಾಲಿ ಉಪಕರಣ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ.
ಕಡಿಮೆ ವೆಚ್ಚದಲ್ಲಿ ಎಲ್ಲರೂ ನಿರ್ಮಿಸಬಹುದಾದ ಸರಳ ಉಪಕರಣವೆಂದು ಅಂತಾರಾಷ್ಟ್ರೀಯಮಟ್ಟದ ಪಶುವೈದ್ಯ ತಜ್ಞರಿಂದ ಪ್ರಶಂಸಿಸಲ್ಪಟ್ಟಿದೆ. ಹಾಸನದ ಪಶುವೈದ್ಯಕೀಯ ಕಾಲೇಜಿನ ಅಂತಿಮ ಪಶುವೈದ್ಯ ಪದವಿ ವಿದ್ಯಾರ್ಥಿ ಕೆ. ನಿತಿನ್ ಈ ಸಾಧನೆ ಮಾಡಿದ್ದಾರೆ.
ಡಾ. (ಮೇಜರ್) ಸುಧೀಶ್ ನಾಯರ್, ಡಾ. ಎನ್. ನಾಗರಾಜ್ ಹಾಗೂ ಡಾ. ಡಿ.ಆರ್. ಮಂಜುನಾಥ ಅವರ ತಜ್ಞ ಮಾರ್ಗದರ್ಶನದಲ್ಲಿ ರೂಪಿಸಿದ ಗಾಲಿ ಉಪಕರಣ, ಪಾರ್ಶ್ವವಾಯು ಪೀಡಿದ ಸಾಕುಪ್ರಾಣಿಗಳಿಗೆ ಮತ್ತು ಜಾನುವಾರುಗಳಿಗೆ ವರದಾನವಾಗಲಿದೆ.
ಗಾಲಿ ಬಂಡಿ ರೂಪಿತವಾಗಿದ್ದು ಹೇಗೆ?
ಹಿಂದಿನ ಎರಡೂ ಕಾಲುಗಳು ಸ್ವಾಧಿನ ಇಲ್ಲದ ಬೀದಿ ನಾಯಿಯೊಂದನ್ನು ಪಶುವೈದ್ಯಕೀಯ ಕಾಲೇಜಿನ ಗೇಟಿನ ಬಳಿ ಯಾರೋ ಬಿಟ್ಟುಹೋಗಿದ್ದರು. ಗಾಯಗೊಂಡು ತೆವಳುತ್ತಿದ್ದ ಮರಿಯನ್ನು ನಿತಿನ್ ಮತ್ತು ಸ್ನೇಹಿತರು ಕಾಲೇಜಿಗೆ ಒಯ್ದು, ಚಿಕಿತ್ಸೆ ನೀಡಿದರು.
ವಾರಸುದಾರರು ಯಾರೂ ಇಲ್ಲದ್ದರಿಂದ ವೆಟಿಕೊ ನಿತಿನ್ ತಮ್ಮ ಮನೆಗೇ ಅದನ್ನು ಕರೆದೊಯ್ದು ಸಾಕಿದರು. ಫಿಜಿಯೋಥೆರಪಿ, ಔಷಧೋಪಚಾರಗಳಿಂದ ಗುಣಕಾಣದೆ ಇದ್ದಾಗ ಅದರ ತೆವಳುವಿಕೆಯನ್ನು ತಪ್ಪಿಸಲು ಆಟದ ಸಾಮಾನುಗಳ ಗಾಲಿಗಳನ್ನು ಬಳಸಿ ಪುಟ್ಟ ಟ್ರಾಲಿಯನ್ನು ರೂಪಿಸಿದರು.
ಬೆಲ್ಟ್ ಸಹಾಯದಿಂದ ಬಂಡಿಯನ್ನು ನಾಯಿಯ ಹಿಂದಿನ ಕಾಲುಗಳಿಗೆ ಬಿಗಿದು ನೆಟ್ಟಗೆ ನಿಲ್ಲಿಸಿದರು. ಮುಂದಿನ ಕಾಲುಗಳಿಂದ ನಡೆಯಲು ಪ್ರಯತ್ನಿಸಿದಂತೆಲ್ಲ ಹಿಂದಿನ ಕಾಲುಗಳು ಗಾಲಿ ಬಂಡಿಯ ಸಹಾಯದಿಂದ ತೊಂದರೆ ಇಲ್ಲದಂತೆ ಸ್ವತಂತ್ರವಾಗಿ ಓಡಾಡಲು ಸಾಧ್ಯವಾಯಿತು.
ಗಾಲಿ ಬಂಡಿಯ ಎತ್ತರ, ತೂಕ, ಉದ್ದ, ಅಗಲಗಳನ್ನು ನಾಯಿಯ ಹಿಂಭಾಗಕ್ಕೆ ಗಾಯವಾಗದ ರೀತಿ ಮತ್ತೆ ಮತ್ತೆ ಪುನರ್‌ರೂಪಿಸಿ, ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಸುಧಾರಣೆ ಮಾಡಿ, ಕೊನೆಗೆ ಅದರ ಯಶಸ್ವೀ ಮಾದರಿಯನ್ನು ಕಾಲೇಜಿನಲ್ಲಿ ಪ್ರದರ್ಶಿಸಲಾಯಿತು. ಅದನ್ನೇ ಅಂತಾರಾಷ್ಟ್ರೀಯ ಪಶುವೈದ್ಯಕೀಯ ಸಮಾವೇಶದಲ್ಲಿ ಪ್ರದರ್ಶಿಸಿ, ಪ್ರಾತ್ಯಕ್ಷಿಕೆ ನೀಡಿದಾಗ ದೊರೆತದ್ದು ಅಭಿನಂದನೆಗಳ ಸುರಿಮಳೆ.
ಗಾಲಿ ಬಂಡಿಗೆ ಪ್ರಥಮ ಬಹುಮಾನ
ಸಾಕುಪ್ರಾಣಿಗಳು, ಮುದ್ದಿನ ಪ್ರಾಣಿ-ಪಕ್ಷಿಗಳು ಮತ್ತು ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದ 7ನೇ ಅಂತಾರಾಷ್ಟ್ರೀಯ ಸಮಾವೇಶ ಇದೇ ಆಗಸ್ಟ್ 13 ಮತ್ತು 14ರಂದು ತಮಿಳುನಾಡಿನ ನಾಮಕ್ಕಲ್‌ನಲ್ಲಿ ಏರ್ಪಾಡಾಗಿತ್ತು. ತಮಿಳುನಾಡು ಪಶುವೈದ್ಯಕೀಯ ಮತ್ತು ಪಶು ವಿಜ್ಞಾನಗಳ ವಿಶ್ವವಿದ್ಯಾಲಯ (ತನುವಾಸ್), ಔಷಧ ತಯಾರಿಕಾ ಸಂಸ್ಥೆಗಳಾದ ಇಂಟಸ್ ಮತ್ತು ಮಾರ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಗಳ ಸಹಯೋಗದಲ್ಲಿ ನಾಮಕ್ಕಲ್‌ನ ಪಶುವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ 7th International Clinical Case on Farm and Companion Animal Practice for Veternery Students ಸಮಾವೇಶದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಮತ್ತು ಅಕ್ಕಪಕ್ಕದ ದೇಶಗಳಿಂದ ಆಗಮಿಸಿದ್ದ ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತಾವು ಹೊಸದಾಗಿ ರೂಪಿಸಿದ ಪ್ರಾಜೆಕ್ಟ್‌ಗಳನ್ನು ಪವರ್ ಪಾಯಿಂಟ್ ಮೂಲಕ ಪ್ರದರ್ಶಿಸಿ, ವಿವರಿಸಿ, ಬಹುಮಾನ ಗಳಿಸಿಕೊಳ್ಳುವ ಅಪರೂಪದ ಅವಕಾಶವಿತ್ತು. ಸುಮಾರು 400 ಪ್ರಾಜೆಕ್ಟ್‌ಗಳು ಸಲ್ಲಿಸಲ್ಪಟ್ಟಿದ್ದವು.
ಸಾಕುಪ್ರಾಣಿ, ಮುದ್ದಿನ ಪ್ರಾಣಿ, ಜಾನುವಾರು, ವನ್ಯಜೀವಿ ಮೊದಲಾದ ವಿಭಾಗಗಳಲ್ಲಿ ಚಿಕಿತ್ಸೆ, ಶಸಚಿಕಿತ್ಸೆ, ಶಸಚಿಕಿತ್ಸಾ ನಂತರದ ನಿರ್ವಹಣೆ, ಔಷಧೋಪಚಾರಕ್ಕೆ ಪೂರಕವಾದ ಉಪಕರಣಗಳ ಬಳಕೆ, ಹೀಗೆ ವಿವಿಧ ವಿಷಯಗಳ 294 ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕರ್ನಾಟಕದ ಪರವಾಗಿ ಭಾಗವಹಿಸಿದ್ದ ಹಾಸನದ ಪಶುವೈದ್ಯಕೀಯ ಕಾಲೇಜಿನ ಒಂಭತ್ತು ಪ್ರಾಜೆಕ್ಟ್‌ಗಳಲ್ಲಿ ಕೆ. ನಿತಿನ್ ರೂಪಿಸಿದ ಪಾರ್ಶ್ವವಾಯುಪೀಡಿತ ನಾಯಿಗಳ ನಿರ್ವಹಣೆಯ ಗಾಲಿಬಂಡಿಗೆ ಪ್ರಥಮ ಬಹುಮಾನ ಹಾಗೂ ಜಿ. ಅರ್ಚನಾ ಪ್ರದರ್ಶಿಸಿದ ರೋಗನಿದಾನ ವಿಧಾನಕ್ಕೆ ಮೂರನೇ ಬಹುಮಾನ ದೊರೆತಿದೆ. ಉಳಿದ ವಿದ್ಯಾರ್ಥಿಗಳು ಸಲ್ಲಿಸಿದ ಇತರೆ ಪ್ರಾಜೆಕ್ಟ್‌ಗಳೂ ಪ್ರಶಂಸೆಗೆ ಪಾತ್ರವಾದವು.
ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪ್ರಥಮ ಬಹುಮಾನ ಗಳಿಸಿರುವ ಕೆ. ನಿತಿನ್‌ರ ಸಂಪರ್ಕ ಸಂಖ್ಯೆ: 9448424020. 



Wheel Cart for Paralysed Animals by Nithin of Hassan Veterinary College - Vijayavani Daily 26.08.2015

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...