ಮೂರ್ಖತನ ಬಯಲು
ಟಿಎಸ್‌ಐ ವಿಶೇಷ ಸಂಚಿಕೆ ಅತ್ಯುತ್ತಮವಾಗಿ ಮೂಡಿಬಂದಿದೆ. 1967ನೇ ವರ್ಷದಿಂದ ಇಲ್ಲಿಯವರೆಗಿನ 40 ವರ್ಷಗಳ 100 ಘಟನೆಗಳ ಚಿತ್ರಣ ವಸ್ತುನಿಷ್ಠವಾಗಿ ಮೂಡಿಬಂದಿದೆ. ಪತ್ರಿಕೋದ್ಯಮಕ್ಕೆ ಈ ರೀತಿಯ ಹೊಸ ಹೊಳಹು ಬೇಕಿತ್ತು. ಇದೇ ಸಂಚಿಕೆಯ ಸಂಪಾದಕೀಯದಲ್ಲಿ ಅರಿಂದಮ್ ಚೌಧುರಿಯವರು ತಮ್ಮ 'ದ ಗ್ರೇಟ್ ಇಂಡಿಯನ್ ಡ್ರೀಮ್' ಕೃತಿಯಲ್ಲಿ ಪ್ರಸ್ತಾಪಿಸಿದ್ದ ವಿವರಗಳ ಹಿನ್ನೆಲೆಯಲ್ಲಿ ಬಂಡವಾಳಶಾಹಿಗಳ ಮೂರ್ಖತನ ಬಯಲಿಗೆಳೆದು, ಆರ್ಥಿಕ ವ್ಯವಸ್ಥೆಯ ಕುಸಿತಕ್ಕೆ ಕಾರಣಗಳನ್ನು ವಿಶ್ಲೇಷಿಸಿದ್ದಾರೆ. ಟ್ರಿಕಲ್ ಡೌನ್ ಸಿದ್ಧಾಂತ ಕೇವಲ ಆರ್ಥಿಕ ವ್ಯವಸ್ಥೆಯ ಮೇಲೆ ಮಾತ್ರ ಉಂಟಾಗಿಲ್ಲ, ಬದಲಾಗಿ ಅಲ್ಲಿನ ಸಾಮಾಜಿಕ ವ್ಯವಸ್ಥೆಯ ದಿವಾಳಿತನಕ್ಕೂ ಕಾರಣವಾಗಿದೆ. ನಿರುದ್ಯೋಗ ತಾಂಡವವಾಡುತ್ತಿರುವ ಅಮೆರಿಕದಲ್ಲಿ ಯುವಜನರು, ಅದರಲ್ಲೂ ಯುವ ವಕೀಲರು, ಮಾಧ್ಯಮದ ಉದ್ಯೋಗಿಗಳು ವಿನಾಕಾರಣ ಜನರ ಮೇಲೆ ಕೇಸುಗಳನ್ನು ಜಡಿದು ಸಾಮಾಜಿಕ ನೆಮ್ಮದಿ ಕೆಡಿಸುತ್ತಿದ್ದಾರೆ. ಪುಟ್ಟ ಮಗುವೊಂದಕ್ಕೆ 'ಹಾಯ್ ಪುಟ್ಟಾ' ಎಂದು ಕರೆದದ್ದಕ್ಕೇ ಲೈಂಗಿಕ ಬಣ್ಣ ನೀಡಿ ರೇಪ್ ಕೇಸ್ ಹಾಕಿದ್ದಾರೆ. ಶಾಲಾ ಬಾಲಕಿಯೊಬ್ಬಳಿಗೆ 'ಹೇಗಿದ್ದೀಯಮ್ಮಾ? ಚೆನ್ನಾಗಿ ಓದುತ್ತಿದ್ದೀಯಾ?' ಎಂದು ಕೇಳಿದ್ದಕ್ಕೇ ಹದಿನೆಂಟು ವಿವಿಧ ಕೇಸುಗಳು ಮಾತನಾಡಿಸಿದಾತನ ಮೇಲೆ! ಮುದುಕ ಬಿದ್ದಾನು ಪಾಪ ಎಂದು ಸಹಾಯಕ್ಕೆ ಹೋದವರ ಮೇಲೆ ದರೋಡೆಯ ಕೇಸು! ವಾಹನ ಅಪಘಾತ ಆಯಿತೆಂದರೆ ಛೇಸಿಂಗ್ ಲಾಯರ್‌ಗಳು ಕೂಡಲೇ ಹಾಜರ್. ಇಂತಹ ಪಾಪರ್ ಚೀಸಾಮಾಜಿಕ ವ್ಯವಸ್ಥೆಯೂ ಟ್ರಿಕಲ್ ಡೌನ್ ಸಿದ್ಧಾಂತದ ಪರಿಣಾಮವೇ! ಇದನ್ನು ಕುರಿತು ವಿಶೇಷ ಅಧ್ಯಯನ ಮತ್ತು ಸಮೀಕ್ಷೆ ನಡೆಯಬೇಕಿದೆ. ಬಹುತೇಕ ಈ ರೀತಿಯ ಕೇಸುಗಳಿಗೆ ಬಲಿಯಾಗಿರುವವರು ಭಾರತೀಯ ವಿದ್ಯಾವಂತ ಯುವಜನರು.
ಬೇದ್ರೆ ಮಂಜುನಾಥ, ಚಿತ್ರದುರ್ಗ