Monday 5 March, 2012

SSLC Pareeksha Mithra of Hassan District - Article in Prajavani Daily - Shikshana 05 March 2012



SSLC Pareeksha Mithra of Hassan District - Article in Prajavani Daily - Shikshana 05 March 2012

ಎಸ್‌ಎಸ್‌ಎಲ್‌ಸಿಗೆ `ಪರೀಕ್ಷಾ ಮಿತ್ರ'

  • March 05, 2012
  • Share  
  • [-]
  • Text
  • [+]

ಹಾಸನ ಜಿಲ್ಲೆಯ ಶಿಕ್ಷಣ ಇಲಾಖೆಯಂತೂ ಪ್ರಗತಿಯ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಫಲಿತಾಂಶದ ನಿರೀಕ್ಷೆಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ, ಇತರೆ ಜಿಲ್ಲೆಗಳಿಗೂ ಮಾದರಿಯಾಗಿದೆ. ಅದು 2010-2011ನೇ ಸಾಲಿನಲ್ಲಿಯೂ ಇಂಥದೇ ವಿಶಿಷ್ಟ ಕ್ರಮ ಕೈಗೊಂಡಿತ್ತು. ಅದರಿಂದಾಗಿ ಹಾಸನ ಜಿಲ್ಲಾ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳೆದ ವರ್ಷ ಶೇ 85.05 ರಷ್ಟಾಗಿ, ರಾಜ್ಯದಲ್ಲಿ ಅದರ ಕ್ರಮಾಂಕ 18ನೇ ಸ್ಥಾನದಿಂದ 9ನೇ ಸ್ಥಾನಕ್ಕೇರಿತ್ತು. 

ಈ ಕ್ರಮಗಳು ಯಾವುವು?

ಪರೀಕ್ಷಾ ಮಿತ್ರ - ಪ್ರಶ್ನೆ ಕೋಠಿಗಳು
ಪರೀಕ್ಷೆಗೆ  ನಿಗದಿಪಡಿಸಿರುವ ನೀಲನಕ್ಷೆ ಆಧಾರದಲ್ಲಿ ಎಸ್‌ಎಸ್‌ಎಲ್‌ಸಿಯ ಆರು ವಿಷಯಗಳಲ್ಲಿ  ಪರೀಕ್ಷಾ ಮಿತ್ರ  ಎಂಬ ಪ್ರಶ್ನೆ ಕೋಠಿಗಳನ್ನು ಮತ್ತು ಆರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಶಾಲೆಗಳಿಗೆ ನೀಡಲಾಗಿದೆ. ಅವುಗಳನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅಂತರ್ಜಾಲದಿಂದಲೂ ಪಡೆದುಕೊಳ್ಳುವಂತೆ ಬ್ಲಾಗ್‌ಗಳಲ್ಲಿ ಅಳವಡಿಸಲಾಗಿದೆ.  ಆಸಕ್ತರು ಈ ಕೆಳಕಂಡ ಬ್ಲಾಗ್‌ಗಳಿಂದ ಪರೀಕ್ಷಾ ಮಿತ್ರ ಕೈಪಿಡಿಗಳನ್ನು, ಪ್ರಶ್ನೆಪತ್ರಿಕೆ ಮತ್ತು ಮಾದರಿ ಉತ್ತರ ಪತ್ರಿಕೆಗಳನ್ನು, ವರ್ಕ್‌ಬುಕ್‌ಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
http://hassanddpi.blogspot.com
http://hassanssa.blogspot.com
http://hassanenglishclub.blogspot.com
http://hassankannadaclub.blogspot.com
http://hassanhindiclub.blogspot.com
http://hassanmathsclub.blogspot.com
http://hassanscienceclub.blogspot.com
http://hassansocialscienceclub.blogspot.com 

ಪದ್ಯ ಸಂತಸ ಸಿ.ಡಿ
ಎಸ್‌ಎಸ್‌ಎಲ್‌ಸಿ ಪಠ್ಯದಲ್ಲಿ ನಿಗದಿಗೊಳಿಸಿರುವ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ವಿಷಯಗಳ ಕಂಠಪಾಠ ಪದ್ಯಗಳಿಗೆ ರಾಗ ಸಂಯೋಜಿಸಿ `ಪದ್ಯ ಸಂತಸ ಸಿ.ಡಿ` ತಯಾರಿಸಿದ್ದು, ಎಲ್ಲಾ ಶಾಲೆಗಳಿಗೂ ವಿತರಿಸಲಾಗಿದೆ. ಪ್ರಾರ್ಥನಾ ಅವಧಿಯಲ್ಲಿ ಪ್ರತಿ ದಿನ ಒಂದೊಂದು ಭಾಷೆಯ ಪದ್ಯವನ್ನು ಮೊದಲೇ ಅಭ್ಯಾಸ ಮಾಡಿಸಿ ಸುಶ್ರಾವ್ಯವಾಗಿ ಹಾಡಿಸಲಾಗುತ್ತಿದೆ. ಇದರಿಂದ ನೆನಪಿಟ್ಟುಕೊಳ್ಳುವುದು ಮಕ್ಕಳಿಗೆ ಸುಲಭವಾಗಿದೆ. ಈ ಸಿ.ಡಿಯಲ್ಲಿನ ಪದ್ಯಗಳ ಆಡಿಯೊ ಕ್ಲಿಪ್‌ಗಳನ್ನು ಮೇಲೆ ಸೂಚಿಸಿರುವ ಬ್ಲಾಗ್‌ಗಳಲ್ಲಿಯೂ ಅಳವಡಿಸಲಾಗಿದ್ದು ಆಸಕ್ತರು ಡೌನ್‌ಲೋಡ್ ಮಾಡಿಕೊಂಡು  ಬಳಸಬಹುದಾಗಿದೆ.
ಆಕಾಶವಾಣಿಯಲ್ಲಿ ಫೋನ್-ಇನ್
ಎಸ್‌ಎಸ್‌ಎಲ್‌ಸಿ ಪಠ್ಯವಿಷಯಕ್ಕೆ ಸಂಬಂಧಿಸಿದ  ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು  ಪ್ರತಿ ಭಾನುವಾರ ಬೆಳಿಗ್ಗೆ 8.35ರಿಂದ 9.30ರವರೆಗೆ ಹಾಸನ ಆಕಾಶವಾಣಿ ಕೇಂದ್ರದ ಮೂಲಕ ಫೋನ್-ಇನ್ ಕಾರ್ಯಕ್ರಮ ಪ್ರಾಯೋಜಿಸಿ ಬಿತ್ತರಿಸಲಾಗಿದೆ. ಮನೋವೈದ್ಯರಿಂದ ಆಪ್ತಸಲಹೆ- ಸಮಾಲೋಚನೆಯೂ ಯಶಸ್ವಿಯಾಗಿ ನಡೆದಿದೆ. ಹಾಸನ, ಚಿಕ್ಕಮಗಳೂರು, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಸಮಸ್ಯೆಗಳಿಗೆ ಸಮಾಧಾನ ಪಡೆದುಕೊಂಡಿದ್ದಾರೆ.
ಮಿಸ್ ಕಾಲ್ ವಿಧಾನ
ವಿದ್ಯಾರ್ಥಿಗಳು ರಾತ್ರಿ  10 ರಿಂದ 11 ರ ವರೆಗೆ ಹಾಗೂ ಬೆಳಿಗ್ಗೆ 5 ರಿಂದ  6 ರ ವರೆಗೆ ಮೊಬೈಲ್‌ನಿಂದ ಪರಸ್ಪರ ಮಿಸ್ ಕಾಲ್ ಕೊಡುವುದರ ಮೂಲಕ ತಾವು ಎಚ್ಚರವಾಗಿರುವ ಮತ್ತು ಓದುತ್ತಿರುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಗುಂಪು  ಯೋಜನೆ
ನಿತ್ಯ ಬೆಳಿಗ್ಗೆ 9 ರಿಂದ 10 ಗಂಟೆ ವರೆಗೆ ಒಂದೊಂದು ವಿಷಯಕ್ಕೆ ಸಂಬಂಧಪಟ್ಟಂತೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಸಂಜೆ 4.30 ರಿಂದ 5.30 ರವರೆಗೆ ಗುಂಪು ಅಧ್ಯಯನ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು 6 ಗುಂಪುಗಳಾಗಿ ವಿಂಗಡಿಸಿ ಪ್ರಶ್ನೆ ಉತ್ತರಗಳನ್ನು ಕಲಿಸಲಾಗುತ್ತಿದೆ. ತರಗತಿಯಲ್ಲಿ ವಿದ್ಯಾರ್ಥಿಯು ಪಠ್ಯಪುಸ್ತಕವನ್ನು ಕಡ್ಡಾಯವಾಗಿ ಓದಲು ಮತ್ತು ಗುರುತು ಮಾಡಿಕೊಂಡ ಅಂಶಗಳನ್ನು ಮನನ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
ವಿದ್ಯಾರ್ಥಿಗಳಿಂದಲೇ ಮೌಲ್ಯ ಮಾಪನ
ಶಾಲೆಗಳಲ್ಲಿ 6 ಕಿರು ಪರೀಕ್ಷೆ, 1 ಅರ್ಧವಾರ್ಷಿಕ  ಪರೀಕ್ಷೆ, ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಶಾಲಾ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ. ಇದು ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ಹೋಗಲಾಡಿಸಿ ಹೊಸ ಮಾದರಿಯ ಪರೀಕ್ಷೆಗೆ ಹೊಂದಿಕೊಳ್ಳಲು ಸಹಕಾರಿಯಾಗಿದೆ.  ಶಾಲೆಯಲ್ಲಿ ನಡೆಸಿರುವ ಎಲ್ಲಾ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಂದಲೇ ಮೌಲ್ಯಮಾಪನ ಮಾಡಿಸಿದ್ದು, ತಮ್ಮ ಉತ್ತರಗಳು ಸರಿ ಇದೆಯೇ? ಯಾವ ರೀತಿ ಉತ್ತರ ಬರೆಯಬೇಕು ಎಂದು ಮನವರಿಕೆ ಮಾಡಿಕೊಳ್ಳಲು ಇದರಿಂದ ಸಹಾಯವಾಗಿದೆ.
ವಿಷಯವಾರು ಸಭೆಗಳು
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆರು ಪಠ್ಯವಿಷಯಗಳ ಶಿಕ್ಷಕರ ಕ್ಲಬ್‌ಗಳನ್ನು ರಚಿಸಲಾಗಿದ್ದು, ಪ್ರತಿ ತಿಂಗಳೂ ಸಭೆ ನಡೆಸಿ ಕಲಿಕೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ನೀಡಲಾಗುತ್ತಿದೆ.  ಪ್ರತಿಯೊಂದು ಕ್ಲಬ್‌ಗೂ ತನ್ನದೇ ಆದ ಬ್ಲಾಗ್ ಇದ್ದು ಆಯಾಯ ಕ್ಲಬ್ ತಯಾರಿಸಿದ ಪ್ರಶ್ನೆಪತ್ರಿಕೆಗಳನ್ನು ಅದರಲ್ಲಿ ಅಳವಡಿಸಲಾಗುತ್ತಿದೆ.
ಮಕ್ಕಳ ದತ್ತು
ಪ್ರತಿಯೊಬ್ಬ ಶಿಕ್ಷಕರಿಗೆ ಶಾಲೆಯಲ್ಲಿನ 10ನೇ ತರಗತಿಯ ವಿದ್ಯಾರ್ಥಿಗಳನ್ನು ಸಮನಾಗಿ ಹಂಚಲಾಗಿದೆ. ಆಯಾ ಶಿಕ್ಷಕರು ಅಗತ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಚರ್ಚಿಸುತ್ತಾರೆ. ಕಲಿಕೆಯ ಬಗ್ಗೆ ವಿದ್ಯಾರ್ಥಿಗೆ ಇರುವ ತೊಂದರೆ ನಿವಾರಿಸಲು ಮತ್ತು ಪೋಷಕರ ಮನವೊಲಿಸಿ ಫಲಿತಾಂಶ ಉತ್ತಮ ಪಡಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.
ಪೋಷಕರ  ಸಭೆ
ಪ್ರತೀ ತಿಂಗಳು ಪೋಷಕರ ಅದರಲ್ಲೂ ಮುಖ್ಯವಾಗಿ ತಾಯಂದಿರ ಸಭೆ ನಡೆಸಿ ವಿದ್ಯಾರ್ಥಿಯ ಕಲಿಕೆ ಪ್ರಗತಿ ತಿಳಿಸಲಾಗುತ್ತಿದೆ. ಹಾಗೆಯೇ ಎಲ್ಲಾ ತಾಲ್ಲೂಕಿನಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳ ಸಮಾವೇಶವನ್ನು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದೆ. ಸಮಾವೇಶಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ, ರಸಪ್ರಶ್ನೆ ಏಟು-ಎದಿರೇಟು, ಥಟ್ಟಂತ ಹೇಳು ಕಾರ್ಯಕ್ರಮ ಮತ್ತು ಕಿರುಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆಯಾಗುವಂತೆ ಮಾಡಲಾಗುತ್ತಿದೆ.
ಶಾಲೆಗಳ ದತ್ತು
ಶೇ 40ಕ್ಕಿಂತ  ಕಡಿಮೆ ಫಲಿತಾಂಶವಿರುವ ಶಾಲೆಗಳನ್ನು ಬಿಇಒ, ಬಿಆರ್‌ಸಿ, ಡಯಟ್‌ನ ಅಧಿಕಾರಿಗಳು ತಾಲ್ಲೂಕು ಪಂಚಾಯತ್ ಇಒ, ಅಕ್ಷರ ದಾಸೋಹದ ಅಧಿಕಾರಿಗಳು, ವಿದ್ಯಾಧಿಕಾರಿಗಳು ಮತ್ತು ವಿಷಯ ಪರಿವೀಕ್ಷಕರಿಗೆ ದತ್ತು ನೀಡಿ ಆ ಶಾಲೆಗಳ ಫಲಿತಾಂಶ ಸುಧಾರಣೆ ಜವಾಬ್ದಾರಿ ವಹಿಸಿಕೊಡಲಾಗಿದೆ.
ಪ್ರಶ್ನೆ ಪೆಟ್ಟಿಗೆ
ತಮಗೆ ಕಠಿಣವೆನಿಸಿದ ಪ್ರಶ್ನೆಗಳನ್ನು ಬರೆದು ಹಾಕಲು 10ನೇ ತರಗತಿ ಕೊಠಡಿಗಳಲ್ಲಿ ಪ್ರಶ್ನೆಪೆಟ್ಟಿಗೆಯನ್ನು ಇಡಲಾಗಿದೆ. ನಿತ್ಯ ಸಂಜೆ ಪ್ರಶ್ನೆಗಳನ್ನು ಸಂಗ್ರಹಿಸಿ ಸಂಬಂಧಿಸಿದ ವಿಷಯ ಶಿಕ್ಷಕರಿಂದ ಉತ್ತರ ಕೊಡಿಸಲಾಗುತ್ತಿದೆ. ಹಾಗೆಯೇ ಪ್ರತಿದಿನ ಎಲ್ಲಾ ವಿಷಯಗಳಲ್ಲಿಯೂ ಒಂದೊಂದರಂತೆ 6 ಪ್ರಶ್ನೆ ಮತ್ತು ಉತ್ತರವನ್ನು ಶಿಕ್ಷಕರು ಕರಿಹಲಿಗೆ ಮೇಲೆ ಬರೆಯುವಂತೆ ಹುರಿದುಂಬಿಸಲಾಗುತ್ತಿದೆ. ಹಾಸನ ಶಿಕ್ಷಣ ಇಲಾಖೆಯ ಈ ವಿಶೇಷ ಕಾರ್ಯ ಯೋಜನೆಯಿಂದ ಈ ಬಾರಿಯೂ ಉತ್ತಮ ಫಲಿತಾಂಶ ತರಬಲ್ಲದು ಎಂಬ ನಿರೀಕ್ಷೆಯಿದೆ. ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲೂ ಶಿಕ್ಷಣ ಇಲಾಖೆ ಇದೇ ರೀತಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದಲ್ಲೇ ಎರಡನೇ ಸ್ಥಾನಕ್ಕೇರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಯಶಸ್ಸು ಇತರೆ ಜಿಲ್ಲೆಗಳಿಗೂ ಮಾದರಿಯಾಗಬಲ್ಲದು.

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...