ಅದ್ಭುತ ಕಥೆಗಾರರು ತಮ್ಮ ಹಿಂದಿನ ತಲೆಮಾರನ್ನು, ಅವರ ಅನುಭವದ ಖಜಾನೆಯನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ರಾಜ್ಯೋತ್ಸವ ವಿಶೇಷಾಂಕದಲ್ಲಿ ಪ್ರಕಟಗೊಂಡ ನಾಲ್ವರು ಕನ್ನಡ ರತ್ನಗಳ ಅನುಭವ ಕಥನಗಳೇ ಸಾಕ್ಷಿ. ಕಂಬಾರರ ಶಿವಾಪುರ ಎಂದಿನಂತೆ ರಸಾಯನದ ರಾಚೋಟಿಯಲ್ಲಿಯೂ ಪ್ರತ್ಯಕ್ಷವಾಗಿದೆ. ಇತ್ತೀಚೆಗೆ ಕಂಬಾರರು ವಿಡಂಬನಕಾರರಾಗುತ್ತಿದ್ದಾರೆನಿಸುತ್ತದೆ. ಲೇಖನಿ ಇನ್ನಷ್ಟು ಹರಿತವಾಗುತ್ತಿದೆ. ಝಳಪಿಸುವ ವೇಗವೂ ಅಷ್ಟೇ! ಕುಂ.ವಿ.ಯ ಮೌಖಿಕ ಕಥನವೇ ಚಂದ. ಅದನ್ನು ಅವರ ಬಾಯಿಂದಲೇ ಕೇಳಿ ಸವಿಯಬೇಕು. ಅಜ್ಜಿ ಸಾಯುವ ಮೊದಲು ಬೈಯ್ದದ್ದು ನಮ್ಮೆಲ್ಲರನ್ನೂ ಉದ್ದೇಶಿಸಿಯೇ ಬೈಯ್ದದ್ದು ಅನ್ನಿಸಿತು. ಭೇಷ್ ಅಜ್ಜಿ. ವೈದೇಹಿಯವರ ಭಯದ ಮುಖಗಳ ಅನಾವರಣ ಎಲ್ಲರೊಳಗೂ ಅವಿತಿರುವ ’ಗುಮ್ಮನ’ ಪರಿಚಯ ಮಾಡಿಕೊಟ್ಟಿದೆ. ಸಿಲಿಕಾನ್ ನಗರಿಯಲ್ಲಿ ಹೆಜ್ಜೆ ಹೆಜ್ಜೆಗೆ ಹೆದರುವ ಪರಿಸ್ಥಿತಿ ಈಗ. ಕಥೆಗಳು ಹುಟ್ಟುವುದೇ ಭಯದಲ್ಲಿ, ಭಯವನ್ನು ಮೀರುವ ಪ್ರಯತ್ನದಲ್ಲಿ ಅನ್ನಿಸುತ್ತದೆ. ಹಿರಿಯ ಮಿತ್ರ ರಾಘವೇಂದ್ರ ಪಾಟೀಲರು ಥಳುಕಿನ ವೆಂಕಣ್ಣಯ್ಯನವರಂತೆ ತಮ್ಮ ಮೂರು ತಲೆಮಾರುಗಳನ್ನು ನೆನೆಯುತ್ತಲೇ ಕಷ್ಟ-ನಷ್ಟದ ಕಥೆಯ ನಡುವೆಯೂ ಪ್ರತಿಷ್ಠೆಗಾಗಿ, ಒಳಿತಿಗಾಗಿ, ಜೀವನ ಪ್ರೀತಿಗಾಗಿ ಬದುಕಿದ ಜನರ ನೋವು-ನಲಿವುಗಳನ್ನು ಕಟ್ಟಿಕೊಡುತ್ತಾರೆ.ಒಟ್ಟಾರೆ ಅದ್ಭುತ ಕಥೆಗಾರರ ಅನುಭವ ಕಥನವನ್ನು ಹಿಡಿದುಕೊಟ್ಟ ಟಿಎಸ್‌ಐಗೆ ಅಭಿನಂದನೆಗಳು.
ಬೇದ್ರೆ ಮಂಜುನಾಥ
ಚಿತ್ರದುರ್ಗ