Monday 25 March, 2013

UPSC Mains 2013 Syllabus Changed - Article in Prajavani Shikshana 25 March 2013




 
ಕೇಂದ್ರ ನಾಗರಿಕ ಸೇವೆ

ಬದಲಾಗಲಿದೆ ಪರೀಕ್ಷಾ ಮಾದರಿ

ಕೇಂದ್ರ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರ್‌ಗಳ (ಕೇಂದ್ರ ನಾಗರಿಕ ಸೇವೆ) ನೇಮಕಾತಿಗಾಗಿ ನಡೆಸುವ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿ ಈ ವರ್ಷದಿಂದ ಬದಲಾಗಲಿದೆ. ಆದರೆ ಈ ಬದಲಾವಣೆಯ ಕೆಲವು ಅಂಶಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಅದರಲ್ಲಿ ಕೊಂಚ ಮಾರ್ಪಾಡುಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿವೃತ್ತ ಅಧ್ಯಕ್ಷ ಪ್ರೊ. ಅರುಣ್ ಎಸ್. ನಿಗವೇಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು, ಮುಖ್ಯ ಪರೀಕ್ಷೆಯ ಸುಧಾರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಶಿಫಾರಸುಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಫೆ. 27ರಂದು ಒಪ್ಪಿಗೆ ಸೂಚಿಸಿದ್ದರು. ಈ ಶಿಫಾರಸುಗಳಿಗೆ ಪೂರಕವಾಗಿಯೇ ಈ ಬಾರಿಯ ಮುಖ್ಯ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ, ಪೂರ್ವಭಾವಿ ಪರೀಕ್ಷೆಗಾಗಿ ಮಾರ್ಚ್ 4ರಂದು ಆಯೋಗ ಅಧಿಸೂಚನೆಯನ್ನೂ ಹೊರಡಿಸಿದೆ.
ಆದರೆ, ಹೊಸ ಶಿಫಾರಸುಗಳ ಅನ್ವಯ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆ ವಿಷಯದಲ್ಲಿ ತರಲು ಹೊರಟಿದ್ದ ಕಟ್ಟುನಿಟ್ಟಿನ ಬದಲಾವಣೆಗಳು ಪರೀಕ್ಷೆ ಆಕಾಂಕ್ಷಿಗಳಿಗೆ ಆಘಾತ ಉಂಟು ಮಾಡಿವೆ. ನೂತನ ಬದಲಾವಣೆಗಳನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಆಗ್ರಹಿಸಿ ಮಾರ್ಚ್ 15ರಂದು ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ `ಹೊಸ ಪಠ್ಯಕ್ರಮದಲ್ಲಿ ಕೆಲ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ' ಎಂದು ಸಿಬ್ಬಂದಿ ಖಾತೆ ಸಚಿವ ವಿ.ನಾರಾಯಣ ಸ್ವಾಮಿ ಇತ್ತೀಚೆಗೆ ಲೋಕಸಭೆಗೆ ತಿಳಿಸಿದ್ದಾರೆ. ಆದರೆ ಈ ಸಂಬಂಧ ಆಯೋಗ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಾಗಿದೆ.
ಹೀಗಾಗಿ ಇತ್ತೀಚೆಗೆ ಆಯೋಗ ಪ್ರಕಟಿಸಿರುವ ಹೊಸ ತೀರ್ಮಾನಗಳು ಮತ್ತು ಅದರಲ್ಲಿ ಆಗಬಹುದಾದ ಪರಿಷ್ಕೃತ ಬದಲಾವಣೆಗಳನ್ನು ಕೆಳಗೆ ಕೊಡಲಾಗಿದೆ. (ಆಯೋಗದಿಂದ ಪ್ರಕಟಣೆ ಹೊರಬಿದ್ದ ನಂತರವಷ್ಟೇ ಪರಿಷ್ಕೃತ ಬದಲಾವಣೆಗಳು ಅಧಿಕೃತಗೊಳ್ಳಲಿವೆ. ಈ ಲೇಖನ ಪ್ರಕಟವಾಗುವ ಹೊತ್ತಿಗೆ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ)
ಅಸಮಾಧಾನಕ್ಕೆ ಕಾರಣವಾಗಿರುವ ಹೊಸ ತೀರ್ಮಾನಗಳು ಹೀಗಿವೆ
1. ಅರ್ಹತಾ ಪರೀಕ್ಷೆಯಾಗಿದ್ದ ಕನ್ನಡ ಅಥವಾ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳನ್ನು ತೆಗೆದುಹಾಕಲಾಗಿದೆ.
2. ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ ಇಂಗ್ಲಿಷ್ ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ವಿಷಯವನ್ನು ಕಡ್ಡಾಯ ಮಾಡಲಾಗಿದೆ.
3. ಎರಡು ಐಚ್ಛಿಕ ವಿಷಯಗಳ ಬದಲಿಗೆ ಕೇವಲ ಒಂದನ್ನು ಆಯ್ದುಕೊಳ್ಳುವ ಅವಕಾಶ ಇದೆ.
4.ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳನ್ನು ಬರೆಯಬೇಕು.
5. ಪದವಿ ಹಂತದಲ್ಲಿ ಓದಿರುವ ಭಾಷಾ ಸಾಹಿತ್ಯ ವಿಷಯವನ್ನು ಇಲ್ಲೂ ಆಯ್ದುಕೊಳ್ಳಬಹುದು. ಇತರ ಪದವಿಯವರು ಭಾಷಾ ಸಾಹಿತ್ಯ ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ.
6. ಪದವಿ ಹಂತದಲ್ಲಿ ಕನ್ನಡ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಅಧ್ಯಯನ ಮಾಡಿದ್ದರೆ ಮಾತ್ರ ಆ ಭಾಷಾ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಬಹುದು.  ಕನಿಷ್ಠ 25 ಅಭ್ಯರ್ಥಿಗಳು ಹೀಗೆ ಒಂದು ಭಾಷೆಯ ಮಾಧ್ಯಮವನ್ನು ತೆಗೆದುಕೊಂಡಲ್ಲಿ ಮಾತ್ರ ಅವಕಾಶ ಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಅವರು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.
7. ಇಂಗ್ಲಿಷ್ ಹೊರತುಪಡಿಸಿ ವಿದೇಶಿ ಭಾಷಾ ಸಾಹಿತ್ಯ ಪತ್ರಿಕೆಗಳನ್ನು ರದ್ದು ಮಾಡಲಾಗಿದೆ. ಹಾಗೆಯೇ ಅತ್ಯಂತ ಸುಲಭವಾಗಿದ್ದ `ಪಾಲಿ ಭಾಷಾ ಸಾಹಿತ್ಯ' ಪತ್ರಿಕೆ ಕೂಡ ರದ್ದಾಗಿದೆ.
8. ಸಂದರ್ಶನಕ್ಕೆ 1: 3ರ ಪ್ರಮಾಣದ ಬದಲು ಇನ್ನು ಮುಂದೆ 1: 2 ಪ್ರಮಾಣದಲ್ಲಿ ಕರೆ ಪತ್ರ ಕಳುಹಿಸಲಾಗುತ್ತದೆ.
ಸಂಭವನೀಯ ಪರಿಷ್ಕೃತ ಬದಲಾವಣೆಗಳ ವಿವರ
1. ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು.
2. ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿ ಹಾಗೂ ಪದವಿಯಲ್ಲಿ ಅದೇ ಭಾಷಾ ಮಾಧ್ಯಮದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ ಇಚ್ಛೆಗೆ ಬಿಡಲಾಗಿದೆ. 
3. ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ (ಸಂವಿಧಾನ ಅನುಮೋದಿಸಿದ 22 ಭಾಷೆಗಳು ಮತ್ತು ಇಂಗ್ಲಿಷ್) ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಪದವಿಯಲ್ಲಿ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ ಇಲ್ಲ.
4. ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್ ಕಾಂಪ್ರಿಹೆನ್ಷನ್ ಮತ್ತು ಪ್ರೆಸಿ (ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಈ ಮೊದಲು ಇದ್ದ ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್ ಪತ್ರಿಕೆಗಳು ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆ ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ. 
ಒಂದು ವೇಳೆ ಮೇಲಿನ ಈ ಎಲ್ಲ ಉದ್ದೇಶಿತ ಬದಲಾವಣೆಗಳು ಜಾರಿಗೆ ಬಂದಿದ್ದೇ ಆದಲ್ಲಿ, ಪರೀಕ್ಷೆ ಬರೆಯುವ ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಪೂರ್ವಭಾವಿ ಪರೀಕ್ಷೆ
2013ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳಿಗೆ ಇದೇ ಮಾರ್ಚ್ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕೇಂದ್ರ ಗೆಜೆಟ್‌ನಲ್ಲಿ ಈ ಕುರಿತು ಪ್ರಕಟಣೆ ಹೊರಬಿದ್ದಿದೆ. ಪರೀಕ್ಷೆಗಳು ಮೇ 26ರಂದು ನಡೆಯಲಿವೆ. ಪೂರ್ವಭಾವಿ ಪರೀಕ್ಷೆಯ ಮಾದರಿ ಎರಡು ವರ್ಷಗಳ ಹಿಂದಷ್ಟೇ ಬದಲಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಹೊಸ ಮಾರ್ಪಾಡುಗಳು ಈ ಪರೀಕ್ಷೆಗೆ ಅನ್ವಯಿಸುವುದಿಲ್ಲ.
ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರು ಈ ಬಾರಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಗೆ ಕರೆದಿರುವ ಅರ್ಜಿಯನ್ನೇ ಸಲ್ಲಿಸಬೇಕು. ಅಭ್ಯರ್ಥಿಗಳು ಸಿವಿಲ್ ಸರ್ವೀಸಸ್ (ಸುಮಾರು 1000+ ಹುದ್ದೆಗಳು) ಮತ್ತು ಐಎಫ್‌ಎಸ್‌ನಲ್ಲಿ (ಸುಮಾರು 85 ಹುದ್ದೆಗಳು) ಯಾವುದಾದರೂ ಒಂದನ್ನು ಅಥವಾ ಎರಡನ್ನೂ ಆಯ್ಕೆ ಮಾಡಿಕೊಳ್ಳಬಹುದು.  ಎರಡನ್ನೂ ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಿವಿಲ್ ಸರ್ವೀಸಸ್ ಮತ್ತು ಫಾರೆಸ್ಟ್ ಸರ್ವೀಸಸ್ ಮುಖ್ಯ ಪರೀಕ್ಷೆಗಳನ್ನು ಪ್ರತ್ಯೇಕ ದಿನಾಂಕಗಳಂದು ನಡೆಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮ
ಪತ್ರಿಕೆ 1: ಸಾಮಾನ್ಯ ಜ್ಞಾನ- 200 ಅಂಕಗಳು- ಅವಧಿ ಎರಡು ಗಂಟೆ

*ಪ್ರಸಕ್ತ ವಿದ್ಯಮಾನ- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗತಿಗಳು.
*ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ.
*ಭಾರತ ಮತ್ತು ಪ್ರಪಂಚದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶ.
*ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ- ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
*ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ- ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ವಿವಿಧ ಯೋಜನೆಗಳು ಇತ್ಯಾದಿ.
*ಪರಿಸರ ಅಧ್ಯಯನ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಮುಂತಾದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. (ಈ ವಿಷಯಗಳಲ್ಲಿ ತುಂಬಾ ಆಳವಾದ ಪರಿಣತಿಯ ಅಗತ್ಯ ಇಲ್ಲ.)
*ಸಾಮಾನ್ಯ ವಿಜ್ಞಾನ.
ಪತ್ರಿಕೆ 2: ಸಿವಿಲ್ ಸರ್ವೀಸ್ ಆ್ಯಪ್ಟಿಟ್ಯೂಡ್- ಅಂಕ 200 - ಅವಧಿ ಎರಡು ಗಂಟೆ
*ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು (ಕಾಂಪ್ರಿಹೆನ್ಷನ್)
*ಸಂವಹನ ಕೌಶಲ ಮತ್ತು ವೈಯಕ್ತಿಕ ಕೌಶಲ (ಇಂಟರ್‌ಪರ‌್ಸನಲ್ ಸ್ಕಿಲ್ಸ್)
*ತಾರ್ಕಿಕ ಆಲೋಚನೆ, ತುಲನಾತ್ಮಕ ಸಾಮರ್ಥ್ಯ
*ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ
*ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
*ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ್ದು)
*ಇಂಗ್ಲಿಷ್ ಭಾಷೆಯ ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.
*ಇಂಗ್ಲಿಷ್ ಕಾಂಪ್ರಿಹೆನ್ಷನ್
ಪರೀಕ್ಷೆ ಇಲ್ಲಿ ನಡೆಯಲಿದೆ
ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆಯಲಿರುವ ಕೇಂದ್ರಗಳು ಬೆಂಗಳೂರು ಮತ್ತು ಧಾರವಾಡ. ಅಂಧ ಅಭ್ಯರ್ಥಿಗಳು ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಲಖನೌ, ಡಿಸ್‌ಪುರ್ ಮತ್ತು ಮುಂಬೈ ಕೇಂದ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬೇಕು.
 
ಹೆಚ್ಚಿನ ವಿವರಗಳಿಗೆ ನೋಡಿ: www.upsc.gov.in/exams/exams.htm
                                  www.upsconline.nic.in
 UPSC Mains 2013 Syllabus Changed - Article in Prajavani Shikshana 25 March 2013

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...