Monday 21 January, 2013

Girl Child Day - Article in Prajavani Shikshana 21 Jan 2013


Girl Child Day - Article in Prajavani Shikshana 21 Jan 2013
 ಪ್ರಜಾವಾಣಿ

ಇಂದು ನಮ್ಮದೇ, ಗೆಲುವು ನಮ್ಮದೇ!

`ಈ ನೆಲದ ಮಗಳು ನಾನು ತಾರೆಯಾಗುವೆ ತಾರೆಯಾಗುವೆ, ನಾನು ಜಗವ ಬೆಳಗುವೆ...'
ಮೀನಾ ತಂಡದ ಈ ಹಾಡನ್ನು ಹೊಳೆನರಸೀಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳು ಹೆಮ್ಮೆಯಿಂದ  ಹೇಳುತ್ತಲೇ ಇದ್ದರು. ಮೀನಾ ತಂಡಗಳು ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ವಿಶೇಷ ಪಾತ್ರ ವಹಿಸಿವೆ.
ರಾಜ್ಯ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ಹೆಣ್ಣು ಮಕ್ಕಳ ವಿಶೇಷ ಶಿಕ್ಷಣಕ್ಕಾಗಿ ಆರಿಸಿದ ಕ್ಲಸ್ಟರ್‌ಗಳಲ್ಲಿ ಈ ಮೀನಾ ತಂಡಗಳನ್ನು ರಚಿಸಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು. ಇದೀಗ ಈ ಜನಪ್ರಿಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗಿದೆ. ಸ
ರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಸಾರ್ವತ್ರೀಕರಣಕ್ಕೆ 2003ರಿಂದಲೇ ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಕಾರ್ಯಕ್ರಮದ (ಎನ್.ಪಿ.ಇ.ಜಿ.ಇ.ಎಲ್.) ಅಡಿ ವಿವಿಧ ಬಗೆಯ ತರಬೇತಿಗಳನ್ನು, ಜಾಗೃತಿ ಶಿಬಿರಗಳನ್ನು, ಆರೋಗ್ಯ ಮಾಹಿತಿ, ಸ್ವ-ಉದ್ಯೋಗದ ಕೌಶಲಗಳನ್ನು ತಿಳಿಸಿಕೊಡಲಾಗುತ್ತಿದೆ. ಇದರ ಕಾರ್ಯಸೂಚಿ ಕೈಪಿಡಿಯ ಮೊದಲ ಪುಟದಲ್ಲಿ ಕಮಲಾ ಭಾಸಿನ್ ಅವರು ಬರೆದ `ನಾನೊಬ್ಬಳು ಹುಡುಗಿಯಾಗಿದ್ದಕ್ಕಾಗಿ, ನಾನು ಓದಲೇ ಬೇಕಿದೆ' ಎಂಬ ಕವನ ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳುತ್ತದೆ.
ಹೆಣ್ಣು ಮಗುವಿನ ದಿನ
ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚಿಸಿದೆ. 1966ರ ಜನವರಿ 24 ರಂದು ಇಂದಿರಾ ಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನಿಯಾದ ಶುಭ ಸಂದರ್ಭವನ್ನು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿಯನ್ನು ತೊಲಗಿಸಿ, ವಿವಿಧ ಕ್ಷೇತ್ರಗಳಲ್ಲಿ ಅವರು ಮುಂದುವರಿಯುವಂತೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ 2009ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. 
ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು, ಲಿಂಗ ತಾರತಮ್ಯ ನಿವಾರಿಸಲು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು `ಸಬಲಾ'ದಂತಹ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವರದಕ್ಷಿಣೆ ತಡೆ ಕಾಯ್ದೆ 2006, ಬಾಲ್ಯವಿವಾಹ ತಡೆ ಕಾಯ್ದೆ 2006, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2009 ಮೊದಲಾದ ಕಾನೂನುಗಳ ಸಹಾಯದಿಂದ ತಡೆಗಟ್ಟಿ, ಅವರಿಗೆ ಸೂಕ್ತ ರಕ್ಷಣೆ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯ 2007- 2012ರ ಮಕ್ಕಳ ಸಂರಕ್ಷಣೆ ಕುರಿತ ಕಾರ್ಯಕ್ರಮ ಸೂಚಿಯಲ್ಲೂ ಹೆಣ್ಣು ಮಗುವಿನ ಶಿಕ್ಷಣ ಮತ್ತು ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.
ಮೀನಾ- ರಾಜು- ಮಿಟ್ಟು
ಮೀನಾ ಎಂಬ ಪುಟ್ಟ ಬಾಲೆಯ ಸಾಹಸಗಳನ್ನು ಈಗಾಗಲೇ ನೀವೆಲ್ಲ ದೂರದರ್ಶನದ ಹಲವು ಕಾರ್ಯಕ್ರಮಗಳಲ್ಲಿ ನೋಡಿರಬಹುದು. ಈ ಪರಿಕಲ್ಪನೆಯಲ್ಲಿ, ಮೀನಾಳ ತಮ್ಮ ರಾಜು ಮತ್ತು ಮುದ್ದು ಗಿಳಿ ಮಿಟ್ಟು ಮಕ್ಕಳಷ್ಟೇ ಅಲ್ಲದೆ ಹಳ್ಳಿಗರೆಲ್ಲರ ಮನ ಸೆಳೆಯುವಲ್ಲಿ, ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಮೀನಾ ಪರಿಕಲ್ಪನೆ ದಕ್ಷಿಣ ಏಷ್ಯಾದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯುನಿಸೆಫ್ ರೂಪಿಸಿದ ವಿಶೇಷ ಕಾರ್ಯಕ್ರಮದ ಅಂಗವಾಗಿ 1990ರ ದಶಕದ ಕೊನೆಯಲ್ಲಿ ಕಾರ್ಯರೂಪಕ್ಕೆ ಬಂದಿತು. 1998ರ ಸೆಪ್ಟೆಂಬರ್ 24ರಂದು ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಮೀನಾ ಪರಿಕಲ್ಪನೆ ಶಿಕ್ಷಣ ಕ್ಷೇತ್ರವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದ್ದರಿಂದ, ಪ್ರತಿ ವರ್ಷ ಸೆಪ್ಟೆಂಬರ್ 24ನ್ನು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ `ಮೀನಾ ದಿನ'ವನ್ನಾಗಿ ಆಚರಿಸುತ್ತಾ ಬರಲಾಗಿದೆ.
ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿರುವ ಬಡತನ, ಅನಕ್ಷರತೆ, ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೀತಪದ್ಧತಿ, ಭಿಕ್ಷಾಟನೆಗಳನ್ನು ಹೊಡೆದೋಡಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ಎಲ್ಲರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು `ಮೀನಾ' ಯಶಸ್ವಿಯಾಗಿದ್ದಾಳೆ. ಒಂಬತ್ತು ವರ್ಷದ ಬಾಲೆ ಮೀನಾಳ ಸಾಹಸಗಳನ್ನು ಒಳಗೊಂಡ ಸುಮಾರು 33 ಕಾರ್ಟೂನ್ ಪುಸ್ತಕಗಳು ಮತ್ತು ಪುಟ್ಟ ಚಲನಚಿತ್ರಗಳು ಕಳೆದ 13 ವರ್ಷಗಳಲ್ಲಿ ಜನಮನ ಸೂರೆಗೊಂಡಿವೆ. ದಕ್ಷಿಣ ಏಷ್ಯಾದ ಎಲ್ಲ ಭಾಷೆಗಳಿಗೆ ಮತ್ತು ವಿಶ್ವದ ಪ್ರಮುಖ ಭಾಷೆಗಳಿಗೆ ತರ್ಜುಮೆ ಆಗಿರುವ ಈ ಮಾಹಿತಿಯು ತೃತೀಯ ವಿಶ್ವದ ಜನಪ್ರಿಯ ಕಾರ್ಯಕ್ರಮವಾಗಿದೆ.

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...