Wednesday, 8 July 2009

Combined PG Course in Physics is Suspended by Mysore University - Does anybody have the will power to start it again?

ಕಳೆದು ಹೋದ ಮೂಲ ವಿಜ್ಞಾನ ಅಧ್ಯಯನದ ಅವಕಾಶ

http://thatskannada.oneindia.in/response/2009/0707-mysuru-university-combined-pg-course.html

ಐದು ವರ್ಷಗಳ ಹಿಂದೆ ಮೂಲ ವಿಜ್ಞಾನದ ವಿಷಯಗಳಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋತ್ಸಾಹ ಹಾಗೂ ಶಿಷ್ಯವೇತನದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾದ ಭೌತವಿಜ್ಞಾನದ ಕಂಬೈಂಡ್ ಪಿ.ಜಿ. ಕೋರ್ಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಇದೀಗ ಹೊರಬರುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿರುವ ಖ್ಯಾತ ವಿಶ್ವವಿದ್ಯಾಲಯ ಗಳಲ್ಲಿ, ಮ್ಯಾಕ್ಸ್‌ಪ್ಲಾಂಕ್ ಸಂಶೋಧನಾಲಯದಲ್ಲಿ, ಸಂಶೋಧನಾವಕಾಶ ಹಾಗೂ ಉನ್ನತ ಸಂಶೋಧನಾಲಯಗಳಲ್ಲಿ ಉದ್ಯೋಗಾವಕಾಶವನ್ನು ಆ ಮೊದಲ ಬ್ಯಾಚಿನ ಎಲ್ಲ ವಿದ್ಯಾರ್ಥಿಗಳಿಗೂ ಸಿಕ್ಕಿದೆ. ಇದು ಆ ಕೋರ್ಸಿನ ಯಶಸ್ಸಿಗೆ ಸಾಕ್ಷಿ.

ಪ್ರೊ. ಶಶಿಧರ್ ಕುಲಪತಿಗಳಾಗಿದ್ದಾಗ ಆರಂಭಿಸಲಾಗಿದ್ದ ಈ ಕೋರ್ಸ್ ಅವರು ನಿವೃತ್ತರಾಗುತ್ತಿದ್ದಂತೆಯೇ ನಿರ್ಲಕ್ಷ್ಯಗೊಳಗಾಗಿದ್ದು ಇದೀಗ ಶಾಶ್ವತವಾಗಿ ಕಣ್ಮುಚ್ಚಿದೆ. ಈ ವರ್ಷದಿಂದ ಆ ಹೆಮ್ಮೆಯ ಕೋರ್ಸ್ ಇಲ್ಲ. ಆಸಕ್ತ ವಿದ್ಯಾರ್ಥಿಗಳಿಗೆ ಬಾಗಿಲು ಶಾಶ್ವತವಾಗಿ ಮುಚ್ಚಿದೆ. ಈ ಹೆಮ್ಮೆಯ ಕಾರ್ಯ ಎಸಗಿದ ನಮ್ಮ ಉನ್ನತ ಶಿಕ್ಷಣ ಸಚಿವರು, ವಿಶ್ವವಿದ್ಯಾಲಯದ ಕುಲಪತಿಗಳು, ಕೋರ್ಸ್ ಕೋ-ಆರ್ಡಿನೇಟರ್‌ಗಳು ಮತ್ತು ಸಂಬಂಧಪಟ್ಟ ಎಲ್ಲರಿಗೂ ಜೈಹೋ!ಐದು ವರ್ಷಗಳ ಭೌತವಿಜ್ಞಾನದ ಇಂಟಿಗ್ರೇಟೆಡ್ ಎಂ.ಎಸ್‌ಸಿ. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ನಿವೃತ್ತ ಕುಲಪತಿಗಳು, ವಿಜ್ಞಾನದ ಪರಿಣತರು, ವಿಜ್ಞಾನಿಗಳು, ವಿಶೇಷವಾಗಿ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್‌ನ ಪ್ರೊ. ಜಿ. ರಾಜಶೇಖರನ್, ಪ್ರೊ. ಎಚ್.ಎಸ್. ಮಣಿ, ಪ್ರೊ. ಎಂ.ವಿ.ಎನ್. ಮೂರ್ತಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಎಸ್.ವಿ. ಸುಬ್ರಹ್ಮಣ್ಯಂ, ಪ್ರೊ. ಎಚ್.ಎಲ್. ಭಟ್, ಪ್ರೊ. ಹರಿದಾಸ್, ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಪ್ರೊ. ಆರ್. ಶ್ರೀನಿವಾಸನ್ ಈ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದು ಎರಡನೇ ವರ್ಷದಿಂದಲೇ ಸಂಶೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ತರಬೇತಿ ಪಡೆದವರಿಗೆ ಮುಂದೆ ಡಿ.ಆರ್.ಡಿ.ಒ.ದಂತಹ ಉನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಉದ್ಯೋಗ ಅವಕಾಶ ಗ್ಯಾರಂಟಿ. ಕೇವಲ 18 ಮಂದಿಗೆ ಮಾತ್ರ ಅವಕಾಶ ಇರುವ ಈ ಕೋರ್ಸ್ ಒಟ್ಟು 10 ಸೆಮಿಸ್ಟರ್‌ಗಳದ್ದಾಗಿದ್ದು ಪ್ರತಿ ಸೆಮಿಸ್ಟರ್‌ನಲ್ಲಿ ಥಿಯರಿ, ಪ್ರಾಕ್ಟಿಕಲ್ ಮತ್ತು ಇಂಟರ್‌ನಲ್ ಅಸೆಸ್‌ಮೆಂಟ್ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

(ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ: www.uni-mysore.ac.in/unity/course/)

ಈ ಕೋರ್ಸ್‌ಗೆ ಸಂಬಂಧಿಸಿದಂತೆ ನಮ್ಮ ಶಾಸಕರು, ಸಂಸದರು ಮತ್ತು ಕೆಲವು ಸಚಿವರನ್ನು ಸಂಪರ್ಕಿಸಿದಾಗ ತೀರಾ ನಿರಾಶಾಜನಕ ಉತ್ತರ ದೊರೆತಿದೆ. ಇಚ್ಛಾಶಕ್ತಿಯೇ ಇಲ್ಲದ ಇಂತಹ ಜನನಾಯಕರಿಂದ ವಿಜ್ಞಾನಕ್ಕೆ ಸಿಕ್ಕುವುದು ಇಷ್ಟೇ. ಅವೈಜ್ಞಾನಿಕ ವಿಷಯಗಳನ್ನು ಗಂಟಾಘೋಷವಾಗಿ ಒದರುತ್ತಿರುವ ಆರ್ಟ್‌ಆಫ್ ಲಿವಿಂಗ್‌ನಂತಹ ಸಂಸ್ಥೆಗಳನ್ನು ಉನ್ನತ ಶಿಕ್ಷಣಕ್ಕೆ ಅಡ್ವೈಸರ್ ಆಗಿ ನೇಮಿಸಿದರೆ ಆಗುವುದು ಇಂಥದ್ದೇ.ಈಗಲೂ ಕಾಲ ಮಿಂಚಿಲ್ಲ ಮೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯವರು ಕೂಡಲೇ ಕಾರ್ಯಪ್ರವೃತ್ತರಾಗಿ ಈ ವಿಶೇಷ ಕೋರ್ಸ್ ಬಗ್ಗೆ ರಾಜ್ಯದ ಎಲ್ಲ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಮತ್ತು ನಿರ್ಲಕ್ಷ್ಯ ಧೋರಣೆ ತಳೆದಿರುವ ಕೋರ್ಸ್ ಕೊ-ಆರ್ಡಿನೇಟರ್ ಮತ್ತು ವಿಭಾಗ ಮುಖ್ಯಸ್ಥರನ್ನು ಕೂಡಲೇ ಬದಲಿಸಿ, ಹೊಸಬರನ್ನು ನೇಮಿಸಿ, ಹೊಸ ಹುರುಪಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು.ಈಗಾಗಲೇ ಮುಚ್ಚಿರುವ ಫೈಲ್ ತೆಗೆಸಿ, ಸಂಶೋಧನೆಗೆ ಅವಕಾಶ ಕಲ್ಪಿಸುವ ಅಪರೂಪದ ಈ ಕೋರ್ಸ್‌ನ್ನು ಮತ್ತೆ ಆರಂಭಿಸಲು ನಮ್ಮ ಶಿಕ್ಷಣ ಸಚಿವರಿಗೆ ಸಾಧ್ಯವೇ? ಅಂತಹ ಇಚ್ಛಾಶಕ್ತಿ ನಮ್ಮ ಮುಖ್ಯಮಂತ್ರಿಗಳಿಗಿದೆಯೇ? ವಿಜ್ಞಾನದ ಹೆಸರಿನಲ್ಲಿ ತೌಡುಕುಟ್ಟುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ವಿಜ್ಞಾನ ಪರಿಷತ್ತು, ವಿವಿಧ ವಿಜ್ಞಾನ ಸಂಘ-ಸಂಸ್ಥೆಗಳು ಏನು ಮಾಡುತ್ತಿವೆ? ನಮ್ಮ ಪತ್ರಿಕಾ ಸಂಪಾದಕರುಗಳು ಏಕೆ ಸುಮ್ಮನಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಯಾವಾಗ? ನೀವೇ ಹೇಳಿ.ವಂದನೆಗಳೊಂದಿಗೆ ತಮ್ಮ ವಿಶ್ವಾಸಿ,

ಬೇದ್ರೆ ಎನ್. ಮಂಜುನಾಥ
Tags: mysore university, letter to the editor, combined pg course, aravind limbavali, ಮೈಸೂರು ವಿಶ್ವವಿದ್ಯಾಲಯ, ಮೂಲವಿಜ್ಞಾನ, ಕಂಬೈನ್ಡ್ ಪಿಜಿ ಕೋರ್ಸ್, ಅರವಿಂದ ಲಿಂಬಾವಳಿ, ಭೌತವಿಜ್ಞಾನ, ಸಂಪಾದಕರಿಗೆ ಪತ್ರ.
ಜುಲೈ 7, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
ಪೂರಕ ಓದಿಗೆ
ಅವಕಾಶದ ಬಾಗಿಲು ಮುಚ್ಚುತ್ತಿರುವ ವಿಶ್ವವಿದ್ಯಾಲಯ

Comments:

ಇಂದ: ಪವನಜ
ದಿನಾಂಕ: 07 Jul 2009 10:37 pm
ಇದು ನಿಜಕ್ಕೂ ಬೇಸರದ ಸಂಗತಿ. ವಿಜ್ಞಾನದ ಅಧ್ಯನಕ್ಕೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಘಂಟಾಘೋಷವಾಗಿ ಹೇಳುತ್ತಿರುವ ಸಿಎನ್‌ರಾವ್ ಅವರಿಗೆ ಈ ವಿಷಯ ಗೊತ್ತಿಲ್ಲವೇ? ಅವರ ಕಿವಿಗೆ ಈ ವಿಷಯ ಬೀಳುವಂತೆ ಮಾಡಬೇಕು. ಕರ್ನಾಟಕ ಜ್ಞಾನ ಆಯೋಗ, ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಇವರಿಗೂ ಈ ವಿಷು ತಿಳಿಸಬೇಕು. ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯವರಿಗೆ ಎಲ್ಲರೂ ಪತ್ರ ಬರೆಯಬೇಕು. ಇನ್ನೂ ಏನಾದರೂ ಮಾಡಬೇಕು ಎಂದು ಯಾರಿಗಾದರೂ ಆಲೋಚನೆ ಬಂದರೆ ತಿಳಿಸಿ. ಆನ್‌ಲೈನ್ ಪಿಟಿಶನ್ ಏನೂ ಪ್ರಯೋಜನ ಆಗಲಾರದು.

Comments:

ಇಂದ: ವಸಂತ್
ದಿನಾಂಕ: 07 Jul 2009 8:00 pm
ವಿಜ್ಞಾನ ವಿಷಯಗಳಲ್ಲಿ ಇಂತಹ ಅವಕಾಶಗಳೇ ಕಡಿಮೆ ಇರುವಾಗ, ಇರುವ ಒಂದೆರಡು ಅವಕಾಶಗಳನ್ನು ಮುಚ್ಚಿದರೆ, ವಿದ್ಯಾರ್ಥಿಗಳಿಗೆ ಸಾಮನ್ಯ ವಿಜ್ಞಾನದ ಬಗ್ಗೆ ಅಭಿಮಾನ ಮೂಡುವುದಾದರೂ ಹೇಗೆ? ಅನಾವಶ್ಯಕ ವಿಷಯಗಳಿಗೆ ಉತ್ತೇಜನ ನೀಡುವ ಬದಲು ಇಂತಹ ಉಪಯುಕ್ತ ವಿಷಯಗಳನ್ನು ಉಳಿಸಿಕೊಳ್ಳಲು ಮೈಸೂರು ವಿಶ್ವವಿದ್ಯಾಲಯಕ್ಕೆ ಏನು ತೊಂದರೆ?

Doodle - Google Uncle Jothe Maathu-Kathe - Informative Literature for Children - A Faction

New Year - New Book - New Look - Thank you Navakarnataka Publications , Late Sri R.S. Rajaram, Sri Ramesh Udupa, Sri Sathyanarayana Alevoora...