ನವದೆಹಲಿಯ ಅವಸರ, ಒತ್ತಡದ ವಾತಾವರಣದ, ತಮ್ಮ ಟಿವಿ-9 ವರದಿಗಾರಿಕೆಯ ನಡುವೆಯೂ ಗೆಳೆಯ ಟಿ.ಆರ್. ಶಿವಪ್ರಸಾದ್ ಆಗೊಮ್ಮೆ ಈಗೊಮ್ಮೆ ನಾವೆಲ್ಲರೂ ಹುಬ್ಬೇರಿಸುವಂತೆ ಮಾಡುವ ಕೆಲವು ಅಪರೂಪದ ಸಾಧನೆಗಳನ್ನು ಮಾಡಿಬಿಡುತ್ತಾರೆ. ರಾಜಸ್ಥಾನದ ಜೋಹಡ್ ಗಳ ಬಗ್ಗೆ ಆಸಕ್ತಿವಹಿಸಿ ಧೂಳಿನ ಸ್ನಾನ ಮಾಡುವುದರಿಂದ ಹಿಡಿದು ಚಂದ್ರನ ಕಿರಣವನ್ನೇ ಹಿಡಿದು ತಮ್ಮ ಚಂದ್ರಯಾನ ಕೃತಿಯಲ್ಲಿ ಬಂಧಿಸಿಡುವವರೆಗೆ, ಸುಭಾಷರ ಸಾವಿನ ಸುತ್ತಲು ಎದ್ದಿದ ವಿವಾದಗಳಾಚೆಗೂ ಸುಭಾಷರನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಕೊಟ್ಟ ಇವರ ಪುಸ್ತಕ ಈಗ ಆರನೇ ಮುದ್ರಣದತ್ತ ಸಾಗಿದೆ!
ಇದೇ ಏಪ್ರಿಲ್ 13 ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ತೊಂಬತ್ತು ವರ್ಷ ಪೂರೈಸಲಿದೆ. ಜನರಲ್ಲಿನ ಒಗ್ಗಟ್ಟು ಎಷ್ಟರ ಮಟ್ಟಿಗೆ ಇತ್ತು ಎನ್ನುವುದನ್ನು ತೋರಿಸಲು ಇದಕ್ಕಿಂತ ಉತ್ತಮ ಪ್ರದರ್ಶನ ಪಂಜಾಬಿನಲ್ಲಿ ನಡೆದಿರಲಿಲ್ಲ. ಈ ಬಲಿದಾನದ ನೆನಪಿಗೆ ಶಿವಪ್ರಸಾದ್ 'ಜಲಿಯನ್ ವಾಲಾಬಾಗ್' ಕುರಿತ ವಿಸ್ತೃತ ಪುಸ್ತಕವೊಂದನ್ನು ಹೊರತರುತ್ತಿದ್ದಾರೆ. ಸಚಿತ್ರ ನಿರೂಪಣೆಯ ಈ ಪುಸ್ತಕ ಜನರನ್ನು ಬೇಗ ತಲುಪಲಿ ಎಂದು ಹಾರೈಸುತ್ತೇನೆ.
ಕಳೆದ ವರ್ಷ ನನ್ನ ಬಗ್ಗೆ ಒಂದು ಸುದೀರ್ಘ ಲೇಖನ ಬರೆದಿದ್ದ ಶಿವಪ್ರಸಾದ್ ಅಬೌಟ್ ಬೇದ್ರೆ ಮಂಜುನಾಥ್ ವಿಥ್ ಜೆಲಸ್! ಎಂದಿದ್ದರು. ಈಗ ನಾನು ಅವರ ಬಗ್ಗೆ ನಿಜವಾಗಿಯೂ ಹೊಟ್ಟೆಕಿಚ್ಚು ಪಡುತ್ತಿದ್ದೇನೆ. ನನ್ನ ಕನಸಿನ ಮೇಷ್ಟ್ರು ಆದರ್ಶ ಗುರು, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಹತ್ತಿರದಿಂದ ನೋಡಲು ನನಗೆ ಸಾಧ್ಯವಾಗಿಲ್ಲ. ಅವರ ಎಲ್ಲಾ ಕೃತಿಗಳನ್ನು ಓದಿ, ಅವುಗಳ ಬಗ್ಗೆ ಟಿಪ್ಪಣಿ ಬರೆದಿದ್ದರೂ ಅವರ ಬಳಿ ಕುಳಿತು ಒಂದೆರಡು ಮಾತನಾಡಲಾಗಿಲ್ಲ. ಆದರೆ ನಮ್ಮ ಶಿವಪ್ರಸಾದ್ ಇದ್ದಾರಲ್ಲಾ, ಇವರು ಮಾತ್ರ ನೋಡಿ ಎಂಥಾ ಮೋಡಿ ಮಾಡಿಬಿಟ್ಟಿದ್ದಾರೆ! ಅವರ ಕೈಕುಲುಕಿದ್ದೇ ಅಲ್ಲದೇ ಅವರ ಬಳಿ ಕುಳಿತು, ತಮ್ಮ ಪುಸ್ತಕದಲ್ಲಿ ಅವರ ಬಗ್ಗೆ ಇದ್ದ ಭಾಗಗಳನ್ನು ಓದಿ ಹೇಳಿದ್ದಾರೆ. ಹೊಟ್ಟೆಕಿಚ್ಚಾಗದಿರುತ್ತದೆಯೇ? ದೇವರೇ, ನನಗೂ ಇಂಥ ಒಂದು ಛಾನ್ಸ್ ಯಾವತ್ತು ಕೊಡಿಸ್ತೀಯಾ?
ಕಲಾಂ ಮೇಷ್ಟ್ರಮುಂದೆ ಪಾಠ ಓದಿ ಒಪ್ಪಿಸಿದ್ದು!
1 comment:
ನೀವು ಹೇಳಿದ್ದು ನಿಜವೋ ಸುಳ್ಲೋ ತಿಳಿಯುತ್ತಿಲ್ಲ. ಮೊನ್ನೆ ತಾನೇ ಅವರ ಚಂದ್ರಯಾನ ಬಿಡುಗಡೆಯಾಗಿದೆ. ಇಷ್ಟು ಬೇಗ ಮತ್ತೊಂದು ಪುಸ್ತಕ ಹೇಗೆ ಹೊರ ತರಲು ಸಾಧ್ಯ?
ಅವರ ಬರಹದ ಬಗ್ಗೆ ಎರಡು ಮಾತಿಲ್ಲ.ಅವರ ಸುಭಾಷ್ ಸಾವಿನ ಸುತ್ತ ಹಾಗೂ ಚಂದ್ರಯಾನ ಎರಡೂ ಪುಸ್ತಕ ಓದಿದ್ದೇನೆ. ಎರಡೂ ಸೂಪರ್! ಕನ್ನಡದಲ್ಲಿ ಸಂಶೋಧನೆ ಆಧರಿತ, ಅಂಕಿ ಅಂಶ, ನಿಖರವಾದ ಸಮಯ, ಬೇರೆ ಬೇರೆ ವರದಿಗಳನ್ನು ಆಧರಿಸಿ ವಾಸ್ತಾವ ಚಿತ್ರಣ ಕೊಡುವಂತೆ ಬರೆಯುವವರು ಇಲ್ಲವೇ ಇಲ್ಲ. ಬರೆಯುವುವುದು ಅಷ್ಟು ಸುಲಭವಲ್ಲ. ಶಿವಪ್ರಸಾದ್ ಈ ಸಂಶೋಧನೆಯ ಜಾಡು ಹಿಡಿದು, ಮಾಹಿತಿ, ಕುತೂಹಲ, ರೋಮಾಂಚನ, ಕಥನ ಶೈಲಿ ಎಲ್ಲವನ್ನೂ ಉಳಿಸಿಕೊಂಡು ಹೊಸ ರೀತಿಯ ಬರವಣಿಗೆಯ ಟ್ರೆಂಡ್ ಕನ್ನಡದಲ್ಲಿ ಹುಟ್ಟಿ ಹಾಕುತ್ತಿದ್ದಾರೆ. ಜಲಿಯನ್ವಾಲಾ ಬಾಗ್ ವಿಷಯ ಕೇಳಿದರೆ ಇಲ್ಲೂ ಅವರು ಅಂಥದ್ದೇ ಸಾಹಸಕ್ಕೆ ಕೈ ಹಾಕಿರುವುದರಲ್ಲಿ ಅನುಮಾನವಿಲ್ಲ.
ಆದರೆ ಅಷ್ಟು ಬೇಗ ಮತ್ತೊಂದು ಪುಸ್ತಕ ಬರೆಯಲು ಸಾಧ್ಯವೇ ಎನ್ನುವುದು ನನ್ನ ಅನುಮಾನ.
Post a Comment