Monday, 22 November 2010

Sahayog Programme in First Grade Colleges - Article in Prajavani - Shikshana - 22 Nov. 2010


Sahayog Programme in First Grade Colleges
Article in Prajavani - Shikshana - 22 Nov. 2010

ಪ್ರಜಾವಾಣಿ » ಶಿಕ್ಷಣ ಪುರವಣಿ



ಉದ್ಯೋಗ ಮಾರುಕಟ್ಟೆಗೆ ಸಹಕಾರಿ ಈ‘ಸಹಯೋಗ್’

ಸುಧಾ ಆರ್. ಹೊಳಲ್ಕೆರೆ



‘ಸಹಯೋಗ್’ ಕಾರ್ಯಕ್ರಮದನ್ವಯ ಕಲೆ, ವಾಣಿಜ್ಯ, ವಿಜ್ಞಾನ ಮೊದಲಾದ ವಿಷಯಗಳಲ್ಲಿ ಕಲಿಯುತ್ತಿರುವ ಅಂತಿಮ ವರ್ಷದ ಪದವಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಕನಿಷ್ಠ 40 ಗಂಟೆಗಳ ಜೀವನ ಕೌಶಲಗಳು ಮತ್ತು 80 ಗಂಟೆಗಳ ವೃತ್ತಿ ಕೌಶಲ ವೃದ್ಧಿಯ ತರಬೇತಿ ನೀಡಬೇಕಿದೆ.



ಪ ದವಿ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲಗಳು ಮತ್ತು ವೃತ್ತಿ ಕೌಶಲಗಳ ಕೊರತೆ ಇದೆ. ಪದವೀಧರರಲ್ಲಿಯೂ ಶೇಕಡಾ 75ರಷ್ಟು ಮಂದಿಗೆ ಜೀವನ ಕೌಶಲಗಳನ್ನು ಉಪಯೋಗಿಸುವುದು ತಿಳಿದಿಲ್ಲ. ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ರಾಷ್ಟ್ರಪತಿಗಳಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹೇಳಿದ್ದರು.  ಇದೇ ಮಾತನ್ನು ಇನ್‌ಫೋಸಿಸ್ ಮುಖ್ಯಸ್ಥರಾಗಿದ್ದ ನಾರಾಯಣಮೂರ್ತಿಯವರೂ ಪುನರುಚ್ಚರಿಸಿದ್ದರು.

ಇತ್ತೀಚೆಗೆ ಕನ್ನಡ ವಿಜ್ಞಾನ ಪರಿಷತ್ತು ನಡೆಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ವಿತರಿಸುವ ಸಂದರ್ಭದಲ್ಲಿ ಸಂಸದ ಜನಾರ್ದನ ಸ್ವಾಮಿಯವರು ಭಾರತೀಯರ ಸಾಧನೆಗಳನ್ನು ಉಲ್ಲೇಖಿಸುತ್ತಲೇ ಕಲಿಯುವಲ್ಲಿ, ಕಲಿಸುವಲ್ಲಿ ಹಿಂದೆ ಬೀಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

 ಹಲವು ವರ್ಷಗಳ ಕಾಲ ಅಮೆರಿಕೆಯ ಸನ್ ಮೈಕ್ರೊಸಿಸ್ಟಂಸ್‌ನಲ್ಲಿ ಹಿರಿಯ ಹುದ್ದೆಯಲ್ಲಿದ್ದು ಅನೇಕ ಪೇಟೆಂಟ್‌ಗಳನ್ನು ಪಡೆದಿರುವ ಈ ಎಂಜಿನಿಯರ್ ಈಗ ಸಂಸತ್ ಸದಸ್ಯರಾಗಿದ್ದು ದೇಶದ ಉನ್ನತ ತಾಂತ್ರಿಕ ವಿದ್ಯಾಲಯಗಳ ಮಂಡಳಿಗಳಲ್ಲಿ ಸದಸ್ಯರಾಗಿದ್ದಾರೆ.  ಅವರದೇ ಮಾತುಗಳನ್ನು ಪುನರುಚ್ಚರಿಸುವುದಾದರೆ, ಅಮೆರಿಕೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಕೋರ್ಸು ಮುಗಿಸುವುದರೊಳಗೇ ಶೇ 95 ರಷ್ಟನ್ನು ಕಲಿತು ಉಳಿದ ಶೇ 5 ರಷ್ಟನ್ನು ವೃತ್ತಿ ಕ್ಷೇತ್ರದಲ್ಲಿ ತೊಡಗಿಕೊಂಡನಂತರ ಕಲಿಯುತ್ತಾರೆ.  ಭಾರತದಲ್ಲಿ ಆ ಪ್ರಮಾಣ ಹಿಂದುಮುಂದಾಗಿದ್ದು ಕಾಲೇಜುಗಳಲ್ಲಿ ಕೇವಲ ಶೇ 5 ರಷ್ಟನ್ನು ಕಲಿತು ಮುಂದೆ ವೃತ್ತಿಕ್ಷೇತ್ರದಲ್ಲಿ ಶೇ 95 ರಷ್ಟನ್ನು ಕಲಿಯುವ ಪರಿಸ್ಥಿತಿ ಇದೆ.  ಈ ಪರಿಸ್ಥಿತಿ ಕೇವಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾತ್ರ ಇಲ್ಲ.

ಶಿಕ್ಷಣ ಕಾಲೇಜುಗಳು, ಪದವಿ ಕಾಲೇಜುಗಳಲ್ಲಿಯೂ ಅದೇ ಹಾಡು. ಇದನ್ನು ನಿವಾರಿಸಲಿಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ‘ಹೊಸಹೆಜ್ಜೆ’ ಎಂಬ ವಿನೂತನ ಕಾರ್ಯಕ್ರಮವೂ ಆರಂಭಗೊಂಡಿದ್ದು ಆಪ್ತಮಿತ್ರ, ಸಹಯೋಗ್, ಅದಾಲತ್, ಮಾನವತೆ, ಸಂಪರ್ಕ ಮತ್ತು ಆಂಗ್ಲ ಎಂಬ ವಿಶೇಷ ತರಬೇತಿ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಜಾಗತಿಕ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕ ಕೌಶಲ ವೃದ್ಧಿಸುವ ಅವಕಾಶ ಒದಗಿಸಿದೆ. ಸಹಯೋಗ್ ಕಾರ್ಯಕ್ರಮ ಕರ್ನಾಟಕ ಜ್ಞಾನ ಆಯೋಗದ ಶಿಫಾರಸಿನ ಮೇರೆಗೆ ಕಾಲೇಜು ಶಿಕ್ಷಣ ನಿರ್ದೇಶನಾಲಯವು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ, ರಾಜ್ಯದ ಕೌಶಲ್ಯ ಆಯೋಗ, ಮತ್ತು ಉದ್ಯೋಗ ಹಾಗೂ ತರಬೇತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಎರಡು ವರ್ಷಗಳಿಂದ ‘ಸಹಯೋಗ್’ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು  2009-10ರಲ್ಲಿ 121 ಪ್ರಥಮದರ್ಜೆ ಕಾಲೇಜುಗಳನ್ನು, 2010-11ರಲ್ಲಿ 82 ಕಾಲೇಜುಗಳನ್ನು ಇದರ ವ್ಯಾಪ್ತಿಗೆ ಒಳಪಡಿಸಿದ್ದು ಬರುವ ವರ್ಷಗಳಲ್ಲಿ ಇನ್ನುಳಿದ ಕಾಲೇಜುಗಳನ್ನು ಈ ಕಾರ್ಯಕ್ರಮದಡಿ ಸೇರಿಸಿಕೊಳ್ಳಲು ಯೋಜನೆ ತಯಾರಿಸಿದೆ.

ಸಹಯೋಗ್ ಕಾರ್ಯಕ್ರಮದನ್ವಯ ಕಲೆ, ವಾಣಿಜ್ಯ, ವಿಜ್ಞಾನ ಮೊದಲಾದ ವಿಷಯಗಳಲ್ಲಿ ಕಲಿಯುತ್ತಿರುವ ಅಂತಿಮ ವರ್ಷದ ಪದವಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಕನಿಷ್ಠ 40 ಗಂಟೆಗಳ ಜೀವನ ಕೌಶಲಗಳು ಮತ್ತು 80 ಗಂಟೆಗಳ ವೃತ್ತಿ ಕೌಶಲ ವೃದ್ಧಿಯ ತರಬೇತಿ ನೀಡಬೇಕಿದೆ. (ಜೀವನ ಕೌಶಲ+ ವೃತ್ತಿ ತರಬೇತಿ = ಉದ್ಯೋಗ ಸಾಮರ್ಥ್ಯ ಮತ್ತು ಉದ್ಯೋಗ.) ಹೀಗೆ ತರಬೇತಿ ಪಡೆದ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಉದ್ಯೋಗ ದೊರಕಿಸಿಕೊಳ್ಳಲು ಸಹಕರಿಸಬೇಕಿದೆ.

ಈಗಾಗಲೇ ಅನೇಕ ಕಾಲೇಜುಗಳಲ್ಲಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು ಹಲವಾರು ಜನರಿಗೆ ಉದ್ಯೋಗ ದೊರೆತಿದೆ.  ಒಟ್ಟು 52 ವಿವಿಧ ಮಾಡ್ಯುಲರ್ ಎಂಪ್ಲಾಯಬಲ್ ಸ್ಕಿಲ್ (ಎಂ.ಇ.ಎಸ್.) ಪಟ್ಟಿಯನ್ನು ಕೇಂದ್ರದ ಉದ್ಯೋಗ ಮತ್ತು ತರಬೇತಿ ಇಲಾಖೆ ಸಿದ್ಧಪಡಿಸಿದ್ದು, www.dget.nic.in/mes/index.htm ಈ ಜಾಲತಾಣದಿಂದ ಹೆಚ್ಚಿನ ವಿವರ ಪಡೆಯಬಹುದು.

ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಕೌಶಲ ಕೊರತೆಯಿರುವ ಅಭ್ಯರ್ಥಿಗಳಿಗೆ ಕೌಶಲ ವೃದ್ಧಿಗೊಳಿಸಿ, ಉದ್ಯೋಗಾವಕಾಶ ಕಲ್ಪಿಸಿ, ಸ್ವ-ಉದ್ಯೋಗ ಮಾಡುವವರಿಗೆ ಅಗತ್ಯ ನೆರವು ನೀಡಿ, ಉದ್ಯೋಗ ಮೇಳಗಳನ್ನು ಹಮ್ಮಿಕೊಂಡು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ದಿಮೆದಾರರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಯಶಸ್ವೀ ಪ್ರಯತ್ನವಾಗಿ ರಾಜ್ಯ ಸರ್ಕಾರ ‘ಕೌಶಲ್ಯಸಿರಿ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕಾಗಿಯೇ 2008 ರ ಸೆಪ್ಟೆಂಬರ್ 12 ರಂದು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಅಂತರ್ಜಾಲ ತಾಣಗಳನ್ನು ಭೇಟಿ ಮಾಡಬಹುದು:
http://dce.kar.nic.in


Sahayog01.html http://dce.kar.nic.in/
HH_Home.html www.koushalyasiri.in

No comments:

Open Book Evaluation - A Boon or Bane - Article in Shikshana Varthe Monthly of July 2024.

      Open Book Evaluation - A Boon or Bane - Article in Shikshana Varthe Monthly of July 2024.