Monday 26 November, 2012

Competitive Examination Preparation - Article in Vijaykarnataka 26 Nov 2012





ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ: ಮೂರು ಮೊಳ ನೇಯೋದ್ಯಾಕೆ?


0
ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ: ಮೂರು ಮೊಳ ನೇಯೋದ್ಯಾಕೆ?
* ಯಾಜ್ಞವಲ್ಕ್ಯ
ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ತುಂಬಾ ಸುಲಭದ ಸಬ್ಜೆಕ್ಟ್ ಕಣ್ರೀ. ಹಾಲಪ್ಪ ಅವರ ಪುಸ್ತಕ ಓದಿದ್ರೆ ಸಾಕು. ಒಂದಷ್ಟು ನೋಟ್ಸ್ ರೆಡಿ ಮಾಡಿಟ್ಕೊಂಡ್ರೂ ನಡೆಯುತ್ತೆ, ಅಂತಾರೆ ಹೊಳಲ್ಕೆರೆಯ ತಿಪ್ಪೇಸ್ವಾಮಿ. ಓದಿರುವುದು ಫಿಸಿಕ್ಸ್ ಎಂಎಸ್ಸಿ. ಆದರೂ ತೆಗೆದುಕೊಂಡಿರುವುದು ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಜಿಯಾಗ್ರಫಿ.

ಕೋಚಿಂಗ್ ಸೆಂಟರ್ ಬಾಜೂಕಿನ ಝೆರಾಕ್ಸ್ ಸೆಂಟರ್‌ದಾಗ ಕೇಳ್ರೀ, ನಿಮಗೆ ಯಾವ ಸಬ್ಜೆಕ್ಟಿಂದು ಬೇಕೋ ಆ ಸಬ್ಜೆಕ್ಟಿಂದು ನೋಟ್ಸ್ ಝೆರಾಕ್ಸ್ ಸಿಕ್ಕುತ್ತಂತೇರಿ. ಗ್ರಾಮೀಣ ಅಭಿವೃದ್ಧಿ ಸಬ್ಜೆಕ್ಟಿಂದು ಬರೇ 150 ಪುಟ ನೋಟ್ಸ್ ಇದೇರಿ. ಚುಲೋ ಐತಿ. ಅಷ್ಟೇ ಓದಿದ್ರೆ ಸಾಕಂತಾರ‌್ರಿ ಗೆಳ್ಯಾರು. ಇದು ಧಾರವಾಡದ ಅಂಬುಕೇಶನ ಅಂಬೋಣ.

ಇದೇ ಡಿಸೆಂಬರ್ 15 ರಿಂದ 2013ರ ಜನವರಿ 06ರವರೆಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಝೆಟೆಡ್ ಪ್ರೊಬೆಷನರ್‌ಗಳ ನೇಮಕಾತಿ ಮುಖ್ಯ (ಮೇನ್) ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು ಡಿಸೆಂಬರ್ 15 ರಂದು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಕಡ್ಡಾಯ ಪತ್ರಿಕೆಗಳು, 16 ರಂದು ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳು ನಿಗದಿಯಾಗಿವೆ. 17 ರಿಂದ ಜನವರಿ 6 ರವರೆಗೆ ವಿವಿಧ ಐಚ್ಛಿಕ ವಿಷಯಗಳ ಎರಡೆರಡು ಪತ್ರಿಕೆಗಳು ಇರಲಿವೆ. (ವಿವರಗಳಿಗೆ ನೋಡಿ: http://kpsc.kar.nic.in) ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಈ ಪರೀಕ್ಷೆಗಳು ಇಷ್ಟು ತಡವಾಗಿ ಆರಂಭವಾಗುತ್ತಿದ್ದು ಸಿದ್ಧತೆಗೆ ಸಾಕಷ್ಟು ಸಮಯ ಇದ್ದಾಗಲೂ ಯಾವುದೋ ಒಂದು ಪುಸ್ತಕ, ಮತ್ಯಾವುದೋ ನೋಟ್ಸ್‌ಗೆ ಜೋತುಬೀಳುವ ಪ್ರವೃತ್ತಿ ಈ ಸ್ಪರ್ಧಾರ್ಥಿಗಳಲ್ಲಿ ಏಕೆ ಬೆಳೆಯುತ್ತಿದೆ?

ಎಸ್‌ಡಿಎ, ಎಫ್‌ಡಿಎ, ಕೆಇಎಸ್, ಕೆಎಎಸ್, ಐಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಂತೆಗೆ ಮೂರು ಮೊಳದಂತೆ ನೇಯ್ದಿರುವ, ಅರೆಬರೆ ಮಾಹಿತಿ ಪೂರೈಸುವ, ನೂರಾರು ಮುದ್ರಣ ದೋಷಗಳಿಂದ ಕೂಡಿದ ವಿವಿಧ ಗೈಡ್‌ಗಳನ್ನು ಓದುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಕಂಕುಳಲ್ಲಿ ಕುರಿ ಇಟ್ಟುಕೊಂಡು ಊರೆಲ್ಲಾ ಹುಡುಕಿದಂತೆ ತಮ್ಮ ಮನೆಯಲ್ಲಿಯೇ ಇರುವ ಅದ್ಭುತ ಮಾಹಿತಿ ಮೂಲಗಳನ್ನು ಬಿಟ್ಟು ಸಂತೆಯ ಸರಕಿಗೆ ಹುಡುಕುವುದು ಎಷ್ಟು ಸರಿ? ಅದರ ಬದಲಿಗೆ ಪ್ರತಿನಿತ್ಯ ಕನಿಷ್ಠ ಒಂದು ಕನ್ನಡ ಮತ್ತು ಒಂದು ಇಂಗ್ಲಿಷ್ ದಿನಪತ್ರಿಕೆ ಓದುವ ಹವ್ಯಾಸ ಇದ್ದು, ಪ್ರತ್ಯೇಕವಾಗಿ ಟಿಪ್ಪಣಿ ಪುಸ್ತಕದಲ್ಲಿ ಆಯಾಯ ದಿನದ ಮುಖ್ಯ ಅಂಶಗಳನ್ನು, ಮಾಹಿತಿಯನ್ನು ಬರೆದಿಟ್ಟು ಕೊಂಡಲ್ಲಿ ಅದೇ ಒಂದು ಅತ್ಯುತ್ತಮವಾದ ಸಾಮಾನ್ಯ ಜ್ಞಾನ ಕೈಪಿಡಿ ಆಗುವುದರಲ್ಲಿ ಸಂಶಯವೇ ಇಲ್ಲ.

ಹಾಗೆಯೇ ಪ್ರತಿ ತಿಂಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗುವ ಮಾಸಿಕಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವವರಿಗೆ ಅಂಕಿ-ಅಂಶಗಳು, ಪ್ರಚಲಿತ ಘಟನೆಗಳ ಮಾಹಿತಿ ಅಂಗೈ ನೆಲ್ಲಿಕಾಯಿಯಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಥಮಿಕ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಒಮ್ಮೆ ಕೂಲಂಕಷವಾಗಿ ಓದುವುದು, ಕೇಂದ್ರೀಯ ವಿದ್ಯಾಲಯಗಳಿಗೆ ನಿಗದಿಗೊಳಿಸಿರುವ ಸಿಬಿಎಸ್‌ಸಿ ಪಠ್ಯಕ್ರಮದ ಅನುಸಾರ ಸಿದ್ಧವಾಗಿ, ಎನ್‌ಸಿಇಆರ್‌ಟಿ ಯಿಂದ ಪ್ರಕಟವಾಗಿರುವ 6 ರಿಂದ 12ನೇ ತರಗತಿಯವರೆಗಿನ ಪಠ್ಯ ಪುಸ್ತಕಗಳನ್ನು ಓದುವುದರಿಂದ ವಿಜ್ಞಾನ, ಸಮಾಜ ವಿಜ್ಞಾನ, ಭಾಷೆ, ಗಣಿತ, ಬೌದ್ಧಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಬಿಡಿಸುವುದು ಸುಲಭವಾಗುತ್ತದೆ. ಹಾಗೆಯೇ ಕನ್ನಡ ವಿಶ್ವಕೋಶ (ಪುಸ್ತಕ ಹಾಗೂ ಸಿ.ಡಿ.), ಎನ್‌ಸೈಕ್ಲೋಪಿಡಿಯಾ ಆಫ್ ಬ್ರಿಟಾನಿಕ, ಎನ್‌ಕಾರ್ಟ, ವರ್ಲ್ಡ್‌ಬುಕ್ ಸಿ.ಡಿಗಳನ್ನು ಗಮನಿಸುವುದು, ವಿಶ್ವವ್ಯಾಪಿ ಅಂತರ್ಜಾಲದಲ್ಲಿ ಲಭ್ಯವಿರುವ ಹಲವು ಜಾಲತಾಣ (ವೆಬ್‌ಸೈಟ್)ಗಳನ್ನು ಭೇಟಿಮಾಡುವುದು, ಮಾಹಿತಿ ಸಂಗ್ರಹಿಸುವ ಹವ್ಯಾಸ ಹೆಚ್ಚು ಅಂಕಗಳಿಸಿ ಆಯ್ಕೆಯಾಗಲು ನೆರವಾಗುತ್ತದೆ.

ಆದ್ರೆ ಆಡೋದು, ಆಗ್ದಿದ್ರೆ ನೋಡೋದು
ಇದೊಂಥರಾ ಫ್ಯಾಶನ್ ಆಗ್ಬಿಟ್ಟಿದೆ ಈಗ. ಪದವಿ/ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಕೆಲಸಕ್ಕೆಂದು ಹುಡುಕಾಡುತ್ತಲೇ ಜತೆಗೆ ಇರಲಿ ಅಂತ ಸಿವಿಲ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರೂ ಜಾಸ್ತಿಯಾಗ್ತಿದ್ದಾರೆ. ಸೀರಿಯಸ್ ಆಗಿ ಅಟೆಂಪ್ಟ್ ಮಾಡೋರು ಸಿಗ್ತಾ ಇಲ್ಲ. ಆದ್ರೆ ಆಡೋಕ್ಬಂದೆ, ಆಗ್ದಿದ್ರೆ ನೋಡೋಕ್ಬಂದೆ ಅನ್ನೋರಿಗೆ ಈ ಕಾಂಪಿಟಿಟಿವ್ ಎಗ್ಸಾಂ ಒಲಿಯೋಲ್ಲರೀ. ಡೈ ಹಾರ್ಡ್ ಮನೋಭಾವದವರು, ಮಾಡಿಯೇ ತೀರ‌್ತೇನೆ ಅನ್ನೋರು ಇಲ್ಲಿ ಯಶಸ್ವಿಯಾಗ್ತಾರೆ' ಎನ್ನುತ್ತಾರೆ ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಛಾಯಾಪತಿ.

ಯೋಗ್ಯ ಅಭ್ಯರ್ಥಿಗಳ ಕೊರತೆ!
ಮಧುರ ಧ್ವನಿ, ಮೃದು ಮಾತು, ಸ್ಪಷ್ಟ ಉಚ್ಚಾರ, ಸರಳ ಇಂಗ್ಲಿಷ್ ಭಾಷೆ ಮತ್ತು ಸಂವಹನ ಕೌಶಲಗಳ ಸಮರ್ಥ ಬಳಕೆ, ನಸುನಗುತ್ತಾ ಎಲ್ಲರೊಂದಿಗೆ ಬೆರೆಯುವ ಸ್ವಭಾವದ, ಅಗತ್ಯಕ್ಕೆ ತಕ್ಕಷ್ಟು ಸಂಖ್ಯೆಯ ಅರ್ಹ ಉದ್ಯೋಗಿಗಳು ದೊರೆಯದೇ ಇರುವ ಪರಿಸ್ಥಿತಿ ಒಂದೆಡೆ ಇದ್ದರೆ, ಇನ್ನೊಂದೆಡೆ ನಿರುದ್ಯೋಗಿಗಳ ಮಹಾಪೂರವೇ ಇದೆ! ದಿ ಇಂಡಿಯಾ ಲೇಬರ್ ರಿಪೋರ್ಟ್ 2009 ರ ಅನ್ವಯ ಉದ್ಯೋಗಕ್ಕೆ ಆಯ್ಕೆಯಾಗುತ್ತಿರುವ ಶೇ 53 ರಷ್ಟು ಯುವಜನರಿಗೆ ಅಗತ್ಯ ಕೌಶಲದ ಕೊರತೆ ಇದೆ. 2010ರ ಫಿಕ್ಕಿ ಸಮೀಕ್ಷೆಯ ಪ್ರಕಾರ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾಲೇಜುಗಳಿಂದ ಹೊರಬರುತ್ತಿರುವ ಪದವೀಧರರಲ್ಲಿ ಶೇ 75 ರಷ್ಟು ಮಂದಿಗೆ ಪ್ರಾಥಮಿಕ ಸಂವಹನ ಕೌಶಲಗಳಲ್ಲಿ ಪರಿಣತಿಯ ಕೊರತೆ ಇದೆ. ಉಳಿದ ಶೇ 25 ರಷ್ಟು ಮಂದಿಗೆ ಸೂಕ್ತ ತರಬೇತಿಯ ಅಗತ್ಯವಿದೆ.

ಅಭ್ಯರ್ಥಿಗಳು ಹೇಗಿರಬೇಕು?
ಉದ್ಯೋಗದಾತರು, ಉದ್ದಿಮೆದಾರರು ಎಂತಹ ಅಭ್ಯರ್ಥಿಗಳನ್ನು ಬಯಸುತ್ತಾರೆ? ಅಭ್ಯರ್ಥಿಗಳಲ್ಲಿ ಯಾವ ಯಾವ ಗುಣಗಳನ್ನು ಹುಡುಕುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಸ್ವಲ್ಪ ಕಷ್ಟ. ಯಾರಿಗೆ ಯಾವ ರೀತಿಯ ಉದ್ಯೋಗಿಗಳ ಅಗತ್ಯವಿದೆಯೋ ಆ ರೀತಿಯ ಉದ್ಯೋಗ ನಿರ್ವಹಿಸುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳನ್ನು ಹುಡುಕುವುದು ಸಹಜ. ಬುದ್ಧಿ ಸೂಚ್ಯಂಕ (ಐಕ್ಯು-Intelligence Quotient) ಭಾವ ಸೂಚ್ಯಂಕ (ಇಕ್ಯು-Emotional Quotient) ಇಚ್ಛಾಶಕ್ತಿ ಸೂಚ್ಯಂಕ (ವಿಕ್ಯುVolition Quotient) ಜ್ಞಾನ/ತಿಳಿವಳಿಕೆ ಸೂಚ್ಯಂಕ (ಕೆಕ್ಯು/ಜಿಕೆಕ್ಯು-Knowledge Quotient/GK Quotient), ಸಮಕಾಲೀನತೆ ಸೂಚ್ಯಂಕ (ಸಿಕ್ಯು-Contemporary Quotient) ಆಧ್ಯಾತ್ಮ ಸೂಚ್ಯಂಕ (ಎಸ್‌ಕ್ಯು-Spiritual Quotient) ಗಳ ಜೊತೆ ಇತ್ತೀಚೆಗೆ ಉದ್ಯೋಗಾರ್ಹತೆಯ ಸೂಚ್ಯಂಕ (ಇಕ್ಯು- Employability Quotient) ಮೊದಲಾದವು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಬಳಕೆಯಾಗುತ್ತಿದೆ. ಮನಸ್ಸಿಟ್ಟು ಅಧ್ಯಯನದಲ್ಲಿ ತೊಡಗಿ, ಅಗತ್ಯ ಕೌಶಲಗಳನ್ನು ಈ ಯುವಜನತೆ ಬೆಳೆಸಿಕೊಳ್ಳಬೇಕು.

ಉದ್ಯೋಗಾರ್ಹತೆಯ 25 ಕೌಶಲಗಳು
1. ಮೌಖಿಕ ಸಂವಹನ ಕೌಶಲಗಳು
2. ಬರಹದ ಸಂವಹನ ಕೌಶಲಗಳು
3. ಪ್ರಾಮಾಣಿಕತೆ
4. ಟೀಂವರ್ಕ್/ಕೆಲಸಗಾರರೊಂದಿಗೆ ಹೊಂದಿಕೊಂಡು ಕೆಲಸಮಾಡುವ ಸಾಮರ್ಥ್ಯ
5. ಸ್ವಯಂ ಪ್ರೇರಣೆಯಿಂದ ಹೊಣೆಗಾರಿಕೆ ವಹಿಸಿಕೊಳ್ಳಲು ಮುಂದಾಗುವ ಸಾಮರ್ಥ್ಯ
6. ಜವಾಬ್ದಾರಿಯುತ ನಡವಳಿಕೆ /ವೃತ್ತಿಧರ್ಮ ಪಾಲನೆಯ ಸಾಮರ್ಥ್ಯ
7. ಸೃಜನಾತ್ಮಕವಾಗಿ /ವಸ್ತುನಿಷ್ಠವಾಗಿ ಆಲೋಚಿಸುವ ಸಾಮರ್ಥ್ಯ
8. ಸವಾಲನ್ನು ಎದುರಿಸುವ ಸಾಮರ್ಥ್ಯ
9. ಹೊಂದಾಣಿಕೆಯ ಮನೋಭಾವ/ಸಾಮರ್ಥ್ಯ
10. ನಾಯಕತ್ವದ ಗುಣಗಳು
11. ಇಂಟರ್‌ಪರ‌್ಸನಲ್ ಸ್ಕಿಲ್ಸ್
12. ಒತ್ತಡದ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ
13. ಪ್ರಶ್ನೆ ಮಾಡುವ ಸಾಮರ್ಥ್ಯ
14. ಸೃಜನಶೀಲತೆ
15. ಪ್ರಭಾವ ಬೀರುವ ಸಾಮರ್ಥ್ಯ
16. ಸಂಶೋಧನಾ ಕೌಶಲಗಳು
17. ಸಾಮಾನ್ಯ ಜ್ಞಾನ ಮತ್ತು ಔದ್ಯೋಗಿಕ ರಂಗದ ಮಾಹಿತಿ
18. ಸಮಸ್ಯಾ ನಿರ್ವಹಣ ಸಾಮರ್ಥ್ಯ
19. ಬಹುಸಂಸ್ಕೃತಿಯ ಕೌಶಲಗಳು
20. ಕಂಪ್ಯೂಟರ್ ಪರಿಣತಿ / ತಾಂತ್ರಿಕ ಪರಿಣತಿ
21. ಶೈಕ್ಷಣಿಕ / ಕಲಿಕಾ ಸಾಮರ್ಥ್ಯ
22. ವಿವರವಾಗಿ ಅರಿಯುವ ಸಾಮರ್ಥ್ಯ
23. ಕ್ವಾಂಟಿಟೇಟಿವ್ ಸಾಮರ್ಥ್ಯ
24. ಬೋಧನೆ / ತರಬೇತಿ ನೀಡುವ ಸಾಮರ್ಥ್ಯ
25. ಸಮಯ ನಿರ್ವಹಣಾ ಸಾಮರ್ಥ್ಯ.
Competitive Examination Preparation - Article in Vijaykarnataka 26 Nov 2012

08 Kinder Katha Books for Children (Senior) - Introduction by Bedre Manjunath in Vishwavani 26.02.2023

    08 Kinder Katha Books for Children (Senior) - Introduction by Bedre Manjunath in Vishwavani 26.02.2023 - Thank you Editors, Shashidhara...